05/02/21 ಪ್ರಾತಃಮುರುಳಿ ಓಂಶಾಂತಿ ಬಾಪ್ದಾದಾ ಮಧುಬನ


"ಮಧುರ ಮಕ್ಕಳೇ - ಇಲ್ಲಿ ನಿಮ್ಮದೆಲ್ಲವೂ ಗುಪ್ತವಾಗಿದೆ, ಆದ್ದರಿಂದ ನೀವು ಯಾವುದೇ ಆಡಂಬರ (ಫ್ಯಾಷನ್) ಮಾಡಬಾರದು, ತಮ್ಮ ಹೊಸ ರಾಜಧಾನಿಯ ನಶೆಯಲ್ಲಿರಬೇಕಾಗಿದೆ.”

ಪ್ರಶ್ನೆ:

ಶ್ರೇಷ್ಠ ಧರ್ಮ ಹಾಗೂ ದೈವೀ ಕರ್ಮದ ಸ್ಥಾಪನೆಗಾಗಿ ನೀವು ಮಕ್ಕಳು ಯಾವ ಪರಿಶ್ರಮ ಪಡುತ್ತೀರಿ?

ಉತ್ತರ:

ನೀವೀಗ ಪಂಚ ವಿಕಾರಗಳನ್ನು ಬಿಡುವ ಪರಿಶ್ರಮ ಪಡುತ್ತೀರಿ, ಏಕೆಂದರೆ ಈ ವಿಕಾರಗಳೇ ಎಲ್ಲರನ್ನೂ ಭ್ರಷ್ಟರನ್ನಾಗಿ ಮಾಡಿದೆ. ನಿಮಗೆ ತಿಳಿದಿದೆ - ಈ ಸಮಯದಲ್ಲಿ ಎಲ್ಲರೂ ದೈವೀ ಧರ್ಮ ಮತ್ತು ಕರ್ಮದಿಂದ ಭ್ರಷ್ಟರಾಗಿದ್ದಾರೆ. ತಂದೆಯೇ ಶ್ರೀಮತವನ್ನು ಕೊಟ್ಟು ಶ್ರೇಷ್ಠ ಧರ್ಮ ಮತ್ತು ಶ್ರೇಷ್ಠ ದೈವೀ ಕರ್ಮದ ಸ್ಥಾಪನೆ ಮಾಡುತ್ತಾರೆ. ನೀವು ಶ್ರೀಮತದಂತೆ ನಡೆದು ತಂದೆಯ ನೆನಪಿನಿಂದ ವಿಕಾರಗಳ ಮೇಲೆ ವಿಜಯ ಪಡೆಯುತ್ತೀರಿ. ವಿದ್ಯೆಯಿಂದ ತಮಗೆ ತಾವು ರಾಜ್ಯ ತಿಲಕವನ್ನು ಇಟ್ಟುಕೊಳ್ಳುತ್ತೀರಿ.

ಗೀತೆ:

ನಿಮ್ಮನ್ನು ಪಡೆದ ನಾನು ಜಗತ್ತನ್ನೇ ಪಡೆದೆನು...............

ಓಂ ಶಾಂತಿ. ಮಧುರಾತಿ ಮಧುರ ಆತ್ಮಿಕ ಮಕ್ಕಳು ಈ ಗೀತೆಯನ್ನು ಕೇಳಿದಿರಿ. ಆತ್ಮಿಕ ಮಕ್ಕಳೇ, ಬಾಬಾ ಎಂದು ಹೇಳುತ್ತೀರಿ. ಮಕ್ಕಳಿಗೆ ತಿಳಿದಿದೆ - ಇವರು ಬೇಹದ್ದಿನ ತಂದೆ, ಬೇಹದ್ದಿನ ಸುಖ ಕೊಡುವವರಾಗಿದ್ದಾರೆ ಅರ್ಥಾತ್ ಅವರು ಎಲ್ಲರ ತಂದೆಯಾಗಿದ್ದಾರೆ. ಅವರನ್ನು ಎಲ್ಲಾ ಬೇಹದ್ದಿನ ಮಕ್ಕಳು, ಆತ್ಮರು ನೆನಪು ಮಾಡುತ್ತಾ ಇರುತ್ತಾರೆ. ಯಾವುದಾದರೊಂದು ಪ್ರಕಾರದಿಂದ ನೆನಪು ಮಾಡುತ್ತಾರೆ ಆದರೆ ನಮಗೆ ಆ ಪರಮಪಿತ ಪರಮಾತ್ಮನಿಂದ ವಿಶ್ವದ ರಾಜ್ಯಭಾಗ್ಯ ಸಿಗುತ್ತದೆಯೆಂದು ಅವರಿಗೆ ತಿಳಿದಿಲ್ಲ. ನೀವು ತಿಳಿದುಕೊಂಡಿದ್ದೀರಿ - ತಂದೆಯು ನಮಗೆ ಸತ್ಯಯುಗೀ ರಾಜ್ಯಭಾಗ್ಯವನ್ನು ಕೊಡುತ್ತಾರೆ, ಅದು ಅಟಲ, ಅಖಂಡ, ಅಡೋಲವಾಗಿದೆ. ಆ ನಮ್ಮ ರಾಜಧಾನಿಯು 21 ಜನ್ಮಗಳವರೆಗೆ ಸ್ಥಿರವಾಗಿರುತ್ತದೆ. ಇಡೀ ವಿಶ್ವದಲ್ಲಿ ನಮ್ಮ ರಾಜ್ಯವಿರುತ್ತದೆ, ಅದನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ, ಲೂಟಿ ಮಾಡಲು ಸಾಧ್ಯವಿಲ್ಲ. ನಮ್ಮ ರಾಜ್ಯವು ಅಡೋಲವಾಗಿರುತ್ತದೆ ಏಕೆಂದರೆ ಅಲ್ಲಿ ಒಂದೇ ಧರ್ಮವಿರುತ್ತದೆ, ದ್ವೈತವಿರುವುದಿಲ್ಲ. ಅದು ಅದ್ವೈತ ರಾಜ್ಯವಾಗಿದೆ. ಮಕ್ಕಳು ಗೀತೆಯನ್ನು ಕೇಳುವಾಗ ತಮ್ಮ ರಾಜಧಾನಿಯ ನಶೆ ಬರಬೇಕು. ಇಂತಹ ಗೀತೆಗಳು ಮನೆಯಲ್ಲಿರಬೇಕು. ನಿಮ್ಮದೆಲ್ಲವೂ ಗುಪ್ತವಾಗಿದೆ ಮತ್ತು ದೊಡ್ಡ-ದೊಡ್ಡ ವ್ಯಕ್ತಿಗಳದು ಬಹಳ ಆಡಂಬರವಿರುತ್ತದೆ. ನಿಮಗೆ ಯಾವುದೇ ಆಡಂಬರವಿಲ್ಲ. ನೀವು ನೋಡುತ್ತೀರಿ - ತಂದೆಯು ಯಾರಲ್ಲಿ ಪ್ರವೇಶ ಮಾಡಿದ್ದಾರೆಯೋ ಅವರೂ ಸಹ ಎಷ್ಟು ಸಾಧಾರಣವಾಗಿರುತ್ತಾರೆ. ಇದನ್ನೂ ಮಕ್ಕಳು ತಿಳಿದುಕೊಂಡಿದ್ದೀರಿ, ಇಲ್ಲಿ ಪ್ರತಿಯೊಬ್ಬ ಮನುಷ್ಯನು ಅಸತ್ಯ ಛೀ ಛೀ ಕೆಲಸವನ್ನೇ ಮಾಡುತ್ತಾರೆ. ಆದ್ದರಿಂದ ಬುದ್ಧಿಹೀನರೆಂದು ಹೇಳಲಾಗುತ್ತದೆ. ಬುದ್ಧಿಗೆ ಬೀಗವು ಹಾಕಲ್ಪಟ್ಟಿದೆ. ನೀವು ಎಷ್ಟು ಬುದ್ಧಿವಂತರಾಗಿದ್ದಿರಿ, ವಿಶ್ವದ ಮಾಲೀಕರಾಗಿದ್ದಿರಿ. ಈಗ ಮಾಯೆಯು ಇಷ್ಟು ಬುದ್ಧಿಹೀನರನ್ನಾಗಿ ಮಾಡಿದೆ. ನೀವು ಯಾವುದೇ ಕೆಲಸಕ್ಕೆ ಬರುವುದಿಲ್ಲ. ತಂದೆಯ ಬಳಿ ಹೋಗುವುದಕ್ಕಾಗಿ ಯಜ್ಞ, ತಪ ಇತ್ಯಾದಿಗಳನ್ನು ಬಹಳ ಮಾಡುತ್ತಿರುತ್ತಾರೆ ಆದರೆ ಸಿಗುವುದೇನೂ ಇಲ್ಲ. ಕೇವಲ ಹಾಗೆಯೇ ಅಲೆದಾಡುತ್ತಿರುತ್ತಾರೆ. ದಿನ-ಪ್ರತಿದಿನ ಅಕಲ್ಯಾಣವೇ ಆಗುತ್ತಾ ಹೋಗುತ್ತದೆ. ಎಷ್ಟೆಷ್ಟು ಮನುಷ್ಯರು ತಮೋಪ್ರಧಾನರಾಗಿ ಬಿಡುವರೋ ಅಷ್ಟಷ್ಟು ಅಕಲ್ಯಾಣವಾಗಲೇಬೇಕಾಗಿದೆ. ಋಷಿ-ಮುನಿ ಯಾರ ಗಾಯನವಿದೆಯೋ ಅವರು ಪವಿತ್ರರಾಗಿದ್ದರು, ಅವರೂ ಸಹ ಪರಮಾತ್ಮನ ಬಗ್ಗೆ ನಮಗೂ ಗೊತ್ತಿಲ್ಲ, ಗೊತ್ತಿಲ್ಲವೆಂದು ಹೇಳುತ್ತಿದ್ದರು. ಈಗ ತಮೋಪ್ರಧಾನರಾಗಿ ಬಿಟ್ಟಿರುವುದರಿಂದ ಶಿವೋಹಂ ತತ್ತ್ವಂ ಅರ್ಥಾತ್ ನಾನೇ ಶಿವ, ಪರಮಾತ್ಮನು ಸರ್ವವ್ಯಾಪಿಯಾಗಿದ್ದಾರೆ, ನನ್ನಲ್ಲಿ ನಿಮ್ಮಲ್ಲಿ ಎಲ್ಲರಲ್ಲಿದ್ದಾರೆ ಎಂದು ಹೇಳಿ ಬಿಡುತ್ತಾರೆ. ಅವರು ಕೇವಲ ಪರಮಾತ್ಮ ಎಂದು ಹೇಳಿ ಬಿಡುತ್ತಾರೆ, ಎಂದೂ ಪರಮಪಿತನೆಂದು ಹೇಳುವುದಿಲ್ಲ. ಪರಮಪಿತನಿಗೆ ಸರ್ವವ್ಯಾಪಿಯೆಂದು ಹೇಳುವುದು ತಪ್ಪಾಗಿ ಬಿಡುತ್ತದೆ. ಆದ್ದರಿಂದ ಈಶ್ವರ ಅಥವಾ ಪರಮಾತ್ಮ ಎಂದು ಹೇಳಿ ಬಿಡುತ್ತಾರೆ. ಪಿತಾ ಎಂಬ ಶಬ್ಧವು ಬುದ್ಧಿಯಲ್ಲಿ ಬರುವುದಿಲ್ಲ, ಭಲೆ ಕೆಲವರು ಹೇಳುತ್ತಾರೆ, ಆದರೆ ನಾಮ ಮಾತ್ರ. ಒಂದುವೇಳೆ ಪರಮಪಿತನೆಂದು ತಿಳಿದಿದ್ದೇ ಆದರೆ ಬುದ್ಧಿಯು ಒಮ್ಮೆಲೆ ಜಾಗೃತವಾಗುವುದು. ತಂದೆಯು ಸ್ವರ್ಗದ ಆಸ್ತಿಯನ್ನು ಕೊಡುತ್ತಾರೆ, ಅವರು ಸ್ವರ್ಗದ ರಚಯಿತನಾಗಿದ್ದಾರೆ ಅಂದಮೇಲೆ ನಾವು ನರಕದಲ್ಲೇಕೆ ಬಿದ್ದಿದ್ದೇವೆ! ನಾವೀಗ ಮುಕ್ತಿ-ಜೀವನ್ಮುಕ್ತಿಯನ್ನು ಹೇಗೆ ಪಡೆಯಬಹುದು ಎಂಬುದು ಯಾರ ಬುದ್ಧಿಯಲ್ಲಿಯೂ ಬರುವುದಿಲ್ಲ. ಆತ್ಮವು ಪತಿತವಾಗಿ ಬಿಟ್ಟಿದೆ. ಮೊದಲು ಆತ್ಮವು ಸತೋಪ್ರಧಾನ, ಬುದ್ಧಿವಂತನಾಗಿರುತ್ತದೆ ನಂತರ ಸತೋ, ರಜೋ, ತಮೋದಲ್ಲಿ ಬರುತ್ತದೆ, ಬುದ್ಧಿಹೀನವಾಗಿ ಬಿಡುತ್ತದೆ. ಈಗ ನಿಮಗೆ ತಿಳುವಳಿಕೆ ಬಂದಿದೆ. ತಂದೆಯು ನಮಗೆ ಈ ಸ್ಮೃತಿಯನ್ನು ತರಿಸಿದ್ದಾರೆ. ಯಾವಾಗ ಹೊಸ ಪ್ರಪಂಚ ಭಾರತವಾಗಿತ್ತೋ ಆಗ ನಮ್ಮ ರಾಜ್ಯವಿತ್ತು. ಒಂದೇ ಮತ, ಒಂದೇ ಭಾಷೆ, ಒಂದೇ ಧರ್ಮ, ಒಬ್ಬರೇ ಮಹಾರಾಜ-ಮಹಾರಾಣಿಯ ರಾಜ್ಯವಿತ್ತು. ನಂತರ ದ್ವಾಪರದಲ್ಲಿ ವಾಮಮಾರ್ಗವು ಆರಂಭವಾಗುತ್ತದೆ. ನಂತರ ಪ್ರತಿಯೊಬ್ಬರ ಕರ್ಮಗಳ ಮೇಲೆ ಅವಲಂಭಿತವಾಗಿ ಬಿಡುತ್ತದೆ. ಕರ್ಮಗಳನುಸಾರ ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತಾರೆ. ಈಗ ತಂದೆಯು ತಿಳಿಸುತ್ತಾರೆ- ನಾನು ನಿಮಗೆ ಇಂತಹ ಕರ್ಮವನ್ನು ಕಲಿಸುತ್ತೇನೆ ಅದರಿಂದ ನೀವು 21 ಜನ್ಮಗಳು ರಾಜ್ಯಭಾಗ್ಯವನ್ನು ಪಡೆಯುತ್ತೀರಿ. ಭಲೆ ಅಲ್ಲಿಯೂ ಲೌಕಿಕ ತಂದೆಯು ಸಿಗುತ್ತಾರೆ ಆದರೆ ಅಲ್ಲಿ ಈ ರಾಜಧಾನಿಯ ಆಸ್ತಿಯು ಬೇಹದ್ದಿನ ತಂದೆಯಿಂದ ಸಿಕ್ಕಿದೆ ಎಂಬ ಜ್ಞಾನವಿರುವುದಿಲ್ಲ. ಮತ್ತೆ ದ್ವಾಪರದಿಂದ ರಾವಣ ರಾಜ್ಯವು ಆರಂಭವಾಗುತ್ತದೆ, ವಿಕಾರೀ ಸಂಬಂಧವಾಗಿ ಬಿಡುತ್ತದೆ ಆಗಿನಿಂದ ಕರ್ಮಗಳನುಸಾರ ಜನ್ಮ ಸಿಗುತ್ತದೆ. ಭಾರತದಲ್ಲಿ ಪೂಜ್ಯ ರಾಜರೂ ಇದ್ದರು ಮತ್ತು ಪೂಜಾರಿ ರಾಜರೂ ಇದ್ದಾರೆ. ಸತ್ಯ-ತ್ರೇತಾಯುಗದಲ್ಲಿ ಎಲ್ಲರೂ ಪೂಜ್ಯರಿರುತ್ತಾರೆ, ಅಲ್ಲಿ ಪೂಜೆ ಅಥವಾ ಭಕ್ತಿ ಯಾವುದೂ ಇರುವುದಿಲ್ಲ. ನಂತರ ದ್ವಾಪರದಲ್ಲಿ ಭಕ್ತಿಮಾರ್ಗವು ಆರಂಭವಾಗುತ್ತದೆ ಆಗ ಯಥಾ ರಾಜ-ರಾಣಿ ತಥಾ ಪ್ರಜಾ ಎಲ್ಲರೂ ಪೂಜಾರಿ ಭಕ್ತರಾಗಿ ಬಿಡುತ್ತಾರೆ. ದೊಡ್ಡವರಿಗಿಂತಲೂ ದೊಡ್ಡ ರಾಜರು ಯಾರು ಸೂರ್ಯವಂಶಿ ರಾಜರಾಗಿದ್ದರೋ ಅವರೇ ಪೂಜಾರಿಗಳಾಗಿ ಬಿಡುತ್ತಾರೆ. ನೀವೀಗ ನಿರ್ವಿಕಾರಿಗಳಾಗುತ್ತೀರಿ ಅದರ ಪ್ರಾಲಬ್ಧವು 21 ಜನ್ಮಗಳವರೆಗೆ ಸಿಗುತ್ತದೆ. ನಂತರ ಭಕ್ತಿಮಾರ್ಗವು ಆರಂಭವಾಗುತ್ತದೆ. ದೇವತೆಗಳ ಮಂದಿರಗಳನ್ನು ಕಟ್ಟಿಸಿ ಪೂಜೆ ಮಾಡುತ್ತಿರುತ್ತಾರೆ. ಇದು ಕೇವಲ ಭಾರತದಲ್ಲಿಯೇ ನಡೆಯುತ್ತದೆ. 84 ಜನ್ಮಗಳ ಯಾವ ಕಥೆಯನ್ನು ತಂದೆಯು ತಿಳಿಸುತ್ತಾರೆಯೋ ಇದು ಭಾರತವಾಸಿಗಳಿಗಾಗಿಯೇ ಇದೆ. ಅನ್ಯ ಧರ್ಮದವರಂತೂ ಕೊನೆಯಲ್ಲಿ ಬರುತ್ತಾರೆ, ವೃದ್ಧಿಯಾಗುತ್ತಾ-ಆಗುತ್ತಾ ಹೆಚ್ಚು ಜನಸಂಖ್ಯೆಯಾಗಿ ಬಿಡುತ್ತದೆ. ವಿಭಿನ್ನ ಧರ್ಮದವರ ಮುಖ ಲಕ್ಷಣಗಳು, ಪ್ರತಿಯೊಂದು ಮಾತಿನಲ್ಲಿ ಭಿನ್ನ-ಭಿನ್ನವಾಗಿ ಬಿಡುತ್ತದೆ. ರೀತಿ-ನೀತಿಗಳು ಭಿನ್ನವಾಗಿರುತ್ತವೆ. ಭಕ್ತಿಮಾರ್ಗಕ್ಕಾಗಿ ಸಾಮಗ್ರಿಯು ಬೇಕು. ಹೇಗೆ ಬೀಜವು ಚಿಕ್ಕದಾಗಿರುತ್ತದೆ, ವೃಕ್ಷವು ಎಷ್ಟು ದೊಡ್ಡದಾಗುತ್ತದೆ! ವೃಕ್ಷದ ಎಲೆಗಳನ್ನು ಎಣಿಕೆ ಮಾಡಲು ಸಾಧ್ಯವಿಲ್ಲ ಹಾಗೆಯೇ ಭಕ್ತಿಯದೂ ವಿಸ್ತಾರವಾಗಿ ಬಿಡುತ್ತದೆ. ಅನೇಕಾನೇಕ ಶಾಸ್ತ್ರಗಳನ್ನು ರಚಿಸುತ್ತಾ ಹೋಗುತ್ತಾರೆ. ಈಗ ತಂದೆಯು ಮಕ್ಕಳಿಗೆ ತಿಳಿಸುತ್ತಾರೆ - ಈ ಭಕ್ತಿಮಾರ್ಗದ ಸಾಮಗ್ರಿಯೆಲ್ಲವೂ ಸಮಾಪ್ತಿಯಾಗಿ ಬಿಡುತ್ತದೆ. ನೀವೀಗ ತಂದೆಯಾದ ನನ್ನನ್ನು ನೆನಪು ಮಾಡಿ. ಭಕ್ತಿಯ ಪ್ರಭಾವವು ಬಹಳ ಇದೆಯಲ್ಲವೆ. ಎಷ್ಟೊಂದು ಸೌಂದರ್ಯ, ನೃತ್ಯ, ತಮಾಷೆ, ಗಾಯನ ಇತ್ಯಾದಿಗಳಿಗಾಗಿ ಎಷ್ಟೊಂದು ಖರ್ಚು ಮಾಡುತ್ತಾರೆ! ಈಗ ತಂದೆಯು ತಿಳಿಸುತ್ತಾರೆ - ನನ್ನನ್ನು ಮತ್ತು ಆಸ್ತಿಯನ್ನು ನೆನಪು ಮಾಡಿ. ತಮ್ಮ ಆದಿ ಸನಾತನ ಧರ್ಮವನ್ನು ನೆನಪು ಮಾಡಿ. ಅನೇಕ ಪ್ರಕಾರದ ಭಕ್ತಿಯನ್ನು ನೀವು ಜನ್ಮ-ಜನ್ಮಾಂತರದಿಂದಲೂ ಮಾಡುತ್ತಾ ಬಂದಿದ್ದೀರಿ. ಸನ್ಯಾಸಿಗಳೂ ಸಹ ಆತ್ಮಗಳಿರುವ ಸ್ಥಾನ, ತತ್ವವನ್ನೇ ಪರಮಾತ್ಮನೆಂದು ತಿಳಿಯುತ್ತಾರೆ. ಬ್ರಹ್ಮ್ತತ್ವವನ್ನೇ ನೆನಪು ಮಾಡುತ್ತಾರೆ. ವಾಸ್ತವದಲ್ಲಿ ಸನ್ಯಾಸಿಗಳು ಸತೋಪ್ರಧಾನರಾಗಿ ಇದ್ದಿದ್ದೇ ಆದರೆ ಅವರು ಹೋಗಿ ಕಾಡಿನಲ್ಲಿ ಶಾಂತಿಯಲ್ಲಿರಬೇಕಾಗಿದೆ. ಅವರು ಬ್ರಹ್ಮ್ದಲ್ಲಿ ಹೋಗಿ ಲೀನವಾಗಬೇಕೆಂದಲ್ಲ. ಬ್ರಹ್ಮ್ತತ್ವದ ನೆನಪಿನಲ್ಲಿರುವುದರಿಂದ ಶರೀರ ಬಿಟ್ಟಾಗ ಬ್ರಹ್ಮ ತತ್ವದಲ್ಲಿಯೇ ಲೀನವಾಗಿ ಬಿಡುತ್ತೇವೆ ಎಂದು ಅವರು ತಿಳಿಯುತ್ತಾರೆ. ಆದರೆ ತಂದೆಯು ತಿಳಿಸುತ್ತಾರೆ - ಯಾರೂ ಲೀನವಾಗಲು ಸಾಧ್ಯವಿಲ್ಲ, ಆತ್ಮವು ಅವಿನಾಶಿಯಲ್ಲವೆ. ಅಂದಮೇಲೆ ಅದು ಹೇಗೆ ಲೀನವಾಗುತ್ತದೆ! ಭಕ್ತಿಮಾರ್ಗದಲ್ಲಿ ಎಷ್ಟೊಂದು ತಲೆ ಕೆಡಿಸುತ್ತಾರೆ! ಭಗವಂತನು ಯಾವುದಾದರೂ ರೂಪದಲ್ಲಿ ಬರುವರೆಂದು ಹೇಳುತ್ತಾರೆ. ಈಗ ಯಾವುದು ಸರಿ? ನಾವು ಬ್ರಹ್ಮ್ತತ್ವದೊಂದಿಗೆ ಯೋಗವನ್ನು ಜೋಡಿಸಿ ಬ್ರಹ್ಮ್ ತತ್ವದಲ್ಲಿ ಲೀನವಾಗುತ್ತೇವೆಂದು ಅವರು ಹೇಳುತ್ತಾರೆ. ಗೃಹಸ್ಥ ಧರ್ಮದವರು ಹೇಳುತ್ತಾರೆ - ಭಗವಂತನು ಯಾವುದಾದರೊಂದು ರೂಪದಲ್ಲಿ ಪತಿತರನ್ನು ಪಾವನ ಮಾಡಲು ಬರುತ್ತಾರೆ. ಮೇಲಿನಿಂದ ಪ್ರೇರಣೆಯ ಮೂಲಕವೇ ಕಲಿಸುತ್ತಾರೆಂದಲ್ಲ. ಶಿಕ್ಷಕರು ಮನೆಯಲ್ಲಿಯೇ ಕುಳಿತು ಪ್ರೇರಣೆ ಕೊಡುವರೇ! ಪ್ರೇರಣೆ ಶಬ್ಧವೇ ಇಲ್ಲ. ಪ್ರೇರಣೆಯಿಂದ ಯಾವುದೇ ಕೆಲಸವಾಗುವುದಿಲ್ಲ. ಭಲೆ ಶಂಕರನ ಪ್ರೇರಣೆಯ ಮೂಲಕ ವಿನಾಶವೆಂದು ಹೇಳಲಾಗುತ್ತದೆ ಆದರೆ ಇದು ಡ್ರಾಮಾದಲ್ಲಿ ನಿಗಧಿಯಾಗಿದೆ. ಅವರಂತೂ ಈ ಅಣ್ವಸ್ತ್ರ ಇತ್ಯಾದಿಗಳನ್ನು ತಯಾರಿಸಲೇಬೇಕಾಗಿದೆ. ಇದು ಕೇವಲ ಮಹಿಮೆಯನ್ನು ಹಾಡಲಾಗುತ್ತದೆ. ಯಾರೂ ಸಹ ತಮ್ಮ ಹಿರಿಯರ ಮಹಿಮೆಯನ್ನು ಅರಿತುಕೊಂಡಿಲ್ಲ. ಧರ್ಮ ಸ್ಥಾಪಕರಿಗೂ ಸಹ ಗುರುವೆಂದು ಹೇಳಿ ಬಿಡುತ್ತಾರೆ. ಆದರೆ ಅವರು ಕೇವಲ ಧರ್ಮ ಸ್ಥಾಪನೆ ಮಾಡುತ್ತಾರೆ. ಯಾರು ಸದ್ಗತಿ ಮಾಡುವರೋ ಅವರಿಗೇ ಗುರುವೆಂದು ಹೇಳಲಾಗುತ್ತದೆ. ಧರ್ಮ ಸ್ಥಾಪಕರಂತೂ ಕೇವಲ ಧರ್ಮ ಸ್ಥಾಪನೆ ಮಾಡಲು ಬರುತ್ತಾರೆ. ಅವರ ಹಿಂದೆ ಅವರ ವಂಶಾವಳಿಯು ಬರಲಾರಂಬಿಸುತ್ತದೆ. ಆದರೆ ಅವರು ಯಾರದೇ ಸದ್ಗತಿ ಮಾಡುವುದಿಲ್ಲ ಅಂದಮೇಲೆ ಅವರಿಗೆ ಗುರುವೆಂದು ಹೇಗೆ ಹೇಳುತ್ತೀರಿ? ಸತ್ಯವಾದ ಗುರು ಒಬ್ಬರೇ ಆಗಿದ್ದಾರೆ, ಅವರಿಗೆ ಸರ್ವರ ಸದ್ಗತಿದಾತ ಎಂದು ಹೇಳಲಾಗುತ್ತದೆ. ಭಗವಂತ ತಂದೆಯೇ ಬಂದು ಎಲ್ಲರ ಸದ್ಗತಿ ಮಾಡುತ್ತಾರೆ, ಮುಕ್ತಿ-ಜೀವನ್ಮುಕ್ತಿಯನ್ನು ಕೊಡುತ್ತಾರೆ. ಅವರ ನೆನಪು ಎಂದೂ ಯಾರಿಂದಲೂ ಬಿಡಿಸಲು ಸಾಧ್ಯವಿಲ್ಲ. ಭಲೆ ಪತಿಯೊಂದಿಗೆ ಎಷ್ಟೇ ಪ್ರೀತಿಯಿದ್ದರೂ ಸಹ ಹೇ ಭಗವಂತ, ಹೇ ಈಶ್ವರ ಎಂದು ಖಂಡಿತವಾಗಿ ಹೇಳುತ್ತಾರೆ ಏಕೆಂದರೆ ಅವರೇ ಸರ್ವರ ಸದ್ಗತಿದಾತನಾಗಿದ್ದಾರೆ. ತಂದೆಯು ಕುಳಿತು ತಿಳಿಸುತ್ತಾರೆ, ಇದೆಲ್ಲವೂ ರಚನೆಯಾಗಿದೆ, ರಚಯಿತ ತಂದೆಯು ನಾನಾಗಿದ್ದೇನೆ. ಎಲ್ಲರಿಗೆ ಸುಖ ಕೊಡುವವರು ಒಬ್ಬರೇ ತಂದೆಯಾದರು. ಸಹೋದರರು ಸಹೋದರನಿಗೆ ಆಸ್ತಿ ಕೊಡಲು ಸಾಧ್ಯವಿಲ್ಲ. ಯಾವಾಗಲೂ ಆಸ್ತಿಯು ತಂದೆಯಿಂದಲೇ ಸಿಗುತ್ತದೆ. ನೀವೆಲ್ಲಾ ಬೇಹದ್ದಿನ ಮಕ್ಕಳಿಗೆ ಬೇಹದ್ದಿನ ಆಸ್ತಿಯನ್ನು ಕೊಡುತ್ತೇನೆ ಆದ್ದರಿಂದಲೇ ಹೇ ಪರಮಪಿತ ಕ್ಷಮೆ ಮಾಡಿ, ದಯೆ ತೋರಿಸಿ ಎಂದು ನನ್ನನ್ನು ನೆನಪು ಮಾಡುತ್ತಾರೆ ಆದರೆ ತಿಳಿದುಕೊಳ್ಳುವುದೇನೂ ಇಲ್ಲ. ಭಕ್ತಿಮಾರ್ಗದಲ್ಲಿ ಅನೇಕ ಪ್ರಕಾರದ ಮಹಿಮೆ ಮಾಡುತ್ತಾರೆ. ಇದೂ ಸಹ ಡ್ರಾಮಾನುಸಾರ ತಮ್ಮ ಪಾತ್ರವನ್ನಭಿನಯಿಸುತ್ತಿರುತ್ತಾರೆ. ತಂದೆಯು ತಿಳಿಸುತ್ತಾರೆ - ನಾನು ಇವರ ಕೂಗಿಗೆ ಬರುವುದಿಲ್ಲ, ನಾನು ಬರುವುದು ಡ್ರಾಮಾದಲ್ಲಿ ನಿಗಧಿಯಾಗಿದೆ. ಡ್ರಾಮಾದಲ್ಲಿ ನಾನು ಬರುವ ಪಾತ್ರವು ನಿಶ್ಚಿತವಾಗಿದೆ, ಅನೇಕ ಧರ್ಮಗಳ ವಿನಾಶ, ಒಂದು ಧರ್ಮದ ಸ್ಥಾಪನೆ ಅಥವಾ ಕಲಿಯುಗದ ವಿನಾಶ, ಸತ್ಯಯುಗದ ಸ್ಥಾಪನೆ ಮಾಡಬೇಕಾಗುತ್ತದೆ. ನಾನು ನನ್ನ ಸಮಯದಲ್ಲಿ ನಾನಾಗಿಯೇ ಬರುತ್ತೇನೆ. ಈ ಭಕ್ತಿಮಾರ್ಗವೂ ಡ್ರಾಮಾದಲ್ಲಿ ಪಾತ್ರವಿದೆ. ಈಗ ಭಕ್ತಿಮಾರ್ಗದ ಪಾತ್ರವು ಪೂರ್ಣವಾಯಿತು. ಆದ್ದರಿಂದ ನಾನು ಬಂದಿದ್ದೇನೆ. ಮಕ್ಕಳೂ ಹೇಳುತ್ತೀರಿ - ನಾವೀಗ ಅರಿತುಕೊಂಡೆವು, 5000 ವರ್ಷಗಳ ನಂತರ ಪುನಃ ತಮ್ಮ ಜೊತೆ ಮಿಲನ ಮಾಡಿದ್ದೇವೆ. ಕಲ್ಪದ ಮೊದಲೂ ಸಹ ಬಾಬಾ ತಾವು ಬ್ರಹ್ಮಾರವರ ತನುವಿನಲ್ಲಿಯೇ ಬಂದಿದ್ದಿರಿ, ಈ ಜ್ಞಾನವು ನಿಮಗೆ ಈಗ ಸಿಗುತ್ತದೆ, ಮತ್ತೆಂದೂ ಸಿಗುವುದಿಲ್ಲ. ಇದು ಜ್ಞಾನ, ಅದು ಭಕ್ತಿಯಾಗಿದೆ. ಜ್ಞಾನದ್ದು ಪ್ರಾಲಬ್ಧ, ಏರುವ ಕಲೆಯಾಗಿದೆ. ಸೆಕೆಂಡಿನಲ್ಲಿ ಜೀವನ್ಮುಕ್ತಿಯೆಂದು ಹೇಳಲಾಗುತ್ತದೆ. ಜನಕನಿಗೆ ಸೆಕೆಂಡಿನಲ್ಲಿ ಜೀವನ್ಮುಕ್ತಿ ಸಿಕ್ಕಿತಲ್ಲವೆ. ಈ ಶಬ್ಧವೂ ಇದೆ - ರಾಧೆಯು ಹೋಗಿ ಅನುರಾಧೆಯಾಗುತ್ತಾಳೆ. ಈ ಜ್ಞಾನದಿಂದ ಜನಕನೂ ಸಹ ಹೋಗಿ ಸೀತೆಯ ತಂದೆ ಅನುಜನಕನಾದನು. ಇದನ್ನೂ ಒಂದು ಉದಾಹರಣೆ ನೀಡಿದ್ದಾರೆ ಆದರೆ ಏನನ್ನೂ ತಿಳಿದುಕೊಂಡಿಲ್ಲ. ಜನಕನು ಸೆಕೆಂಡಿನಲ್ಲಿ ಜೀವನ್ಮುಕ್ತಿ ಪಡೆದನೆಂದು ಹೇಳುತ್ತಾರೆ ಅಂದರೆ ಕೇವಲ ಒಬ್ಬ ಜನಕನೇ ಜೀವನ್ಮುಕ್ತಿಯನ್ನು ಪಡೆದನೆ? ಜೀವನ್ಮುಕ್ತಿ ಎಂದರೆ ಈ ರಾವಣ ರಾಜ್ಯದಿಂದ ಜೀವನವನ್ನು ಮುಕ್ತಮಾಡುತ್ತಾರೆ. ತಂದೆಗೆ ಗೊತ್ತಿದೆ, ಈಗ ಎಲ್ಲಾ ಮಕ್ಕಳದು ಎಷ್ಟೊಂದು ದುರ್ಗತಿಯಾಗಿ ಬಿಟ್ಟಿದೆ, ಪುನಃ ಅವರ ಸದ್ಗತಿಯಾಗಬೇಕಾಗಿದೆ. ದುರ್ಗತಿಯಿಂದ ಮತ್ತೆ ಶ್ರೇಷ್ಠ ಗತಿ ಅರ್ಥಾತ್ ಮುಕ್ತಿ-ಜೀವನ್ಮುಕ್ತಿಯನ್ನು ಪಡೆಯುತ್ತೀರಿ. ಮೊದಲು ಮುಕ್ತಿಯಲ್ಲಿ ಹೋಗಿ ನಂತರ ಜೀವನ್ಮುಕ್ತಿಯಲ್ಲಿ ಬರುತ್ತೀರಿ. ಶಾಂತಿಧಾಮದಿಂದ ಮತ್ತೆ ಸುಖಧಾಮದಲ್ಲಿ ಬರುತ್ತೀರಿ. ಈ ಚಕ್ರದ ಎಲ್ಲಾ ರಹಸ್ಯವನ್ನು ತಂದೆಯು ತಿಳಿಸಿದ್ದಾರೆ. ನಿಮ್ಮ ಜೊತೆ ಅನ್ಯ ಧರ್ಮದವರೂ ಬರತೊಡಗುತ್ತಾರೆ. ಮನುಷ್ಯ ಸೃಷ್ಟಿಯು ವೃದ್ಧಿಯಾಗತೊಡಗುತ್ತದೆ. ತಂದೆಯು ತಿಳಿಸುತ್ತಾರೆ - ಈ ಸಮಯದಲ್ಲಿ ಈ ಮನುಷ್ಯ ಸೃಷ್ಟಿಯ ವೃಕ್ಷವು ತಮೋಪ್ರಧಾನ, ಜಡಜಡೀಭೂತವಾಗಿ ಬಿಟ್ಟಿದೆ, ಆದಿ ಸನಾತನ ದೇವಿ-ದೇವತಾ ಧರ್ಮದ ಬುನಾದಿಯೇ ಸಡಿಲವಾಗಿ ಬಿಟ್ಟಿದೆ. ಉಳಿದೆಲ್ಲಾ ಧರ್ಮಗಳು ನಿಂತಿವೆ. ಭಾರತದಲ್ಲಿ ಯಾರೊಬ್ಬರೂ ಸಹ ತಮ್ಮನ್ನು ಆದಿ ಸನಾತನ ದೇವಿ-ದೇವತಾ ಧರ್ಮದವರೆಂದು ತಿಳಿಯುವುದಿಲ್ಲ, ದೇವತಾ ಧರ್ಮದವರೇ ಆಗಿದ್ದಾರೆ. ಆದರೆ ಈ ಸಮಯದಲ್ಲಿ ಯಾರೂ ಸಹ ನಾವು ಆದಿ ಸನಾತನ ದೇವಿ-ದೇವತಾ ಧರ್ಮದವರಾಗಿದ್ದೆವೆಂದು ತಿಳಿಯುವುದಿಲ್ಲ. ಏಕೆಂದರೆ ದೇವತೆಗಳು ಪವಿತ್ರರಾಗಿದ್ದರು ಆದ್ದರಿಂದ ತಿಳಿದುಕೊಳ್ಳುತ್ತಾರೆ - ನಾವಂತೂ ಪವಿತ್ರರಾಗಿಲ್ಲ, ನಾವು ಅಪವಿತ್ರ ಪತಿತರು, ನಮ್ಮನ್ನು ದೇವತೆಗಳೆಂದು ಹೇಗೆ ಕರೆಸಿಕೊಳ್ಳುವುದು? ಹಿಂದೂಗಳೆಂಬುದೂ ಸಹ ಡ್ರಾಮಾದ ಪ್ಲಾನನುಸಾರ ಪದ್ಧತಿಯಾಗಿ ಬಿಡುತ್ತದೆ. ಜನಗಣತಿಯಲ್ಲಿಯೂ ಹಿಂದೂ ಧರ್ಮವೆಂದು ಬರೆದು ಬಿಡುತ್ತಾರೆ. ಭಲೆ ಗುಜರಾತಿನವರಾಗಿದ್ದರೂ ಸಹ ಹಿಂದೂ ಗುಜರಾತಿಯೆಂದು ಹೇಳಿ ಬಿಡುತ್ತಾರೆ. ಹಿಂದೂ ಧರ್ಮವು ಎಲ್ಲಿಂದ ಬಂದಿತೆಂದು ಅವರನ್ನು ಕೇಳಿದರೆ ಚೆನ್ನಾಗಿರುತ್ತದೆ. ಯಾರಿಗೂ ಸಹ ಗೊತ್ತಿಲ್ಲ, ಕೇವಲ ನಮ್ಮ ಧರ್ಮವನ್ನು ಕೃಷ್ಣನು ಸ್ಥಾಪನೆ ಮಾಡಿದನೆಂದು ಹೇಳಿ ಬಿಡುತ್ತಾರೆ. ಯಾವಾಗ? ದ್ವಾಪರದಲ್ಲಿ. ದ್ವಾಪರದಲ್ಲಿಯೇ ಇವರು ತಮ್ಮ ಧರ್ಮವನ್ನು ಮರೆತು ಹಿಂದೂಗಳೆಂದು ಕರೆಸಿಕೊಳ್ಳಲು ತೊಡಗಿದ್ದಾರೆ. ಆದ್ದರಿಂದ ದೈವೀ ಧರ್ಮ ಭ್ರಷ್ಟರಾಗಿದ್ದಾರೆಂದು ಹೇಳಲಾಗುತ್ತದೆ. ಅಲ್ಲಿ ಎಲ್ಲರೂ ಒಳ್ಳೆಯ ಕರ್ಮ ಮಾಡುತ್ತಾರೆ, ಇಲ್ಲಿ ಎಲ್ಲರೂ ಛೀ ಛೀ ಕರ್ಮಗಳನ್ನು ಮಾಡುತ್ತಾರೆ. ಆದ್ದರಿಂದ ದೇವಿ-ದೇವತಾ ಧರ್ಮ ಭ್ರಷ್ಟರು, ಕರ್ಮ ಭ್ರಷ್ಟರೆಂದು ಹೇಳಲಾಗುತ್ತದೆ. ಈಗ ಪುನಃ ಶ್ರೇಷ್ಠ ಧರ್ಮ, ಶ್ರೇಷ್ಠ ದೈವೀ ಕರ್ಮದ ಸ್ಥಾಪನೆಯಾಗುತ್ತಿದೆ. ಆದ್ದರಿಂದ ಈಗ ಈ ಪಂಚ ವಿಕಾರಗಳನ್ನು ಬಿಡುತ್ತಾ ಹೋಗಿ ಎಂದು ತಂದೆಯು ಹೇಳುತ್ತಾರೆ. ಈ ವಿಕಾರಗಳು ಅರ್ಧಕಲ್ಪದಿಂದಲೂ ಇವೆ. ಇದೊಂದು ಜನ್ಮದಲ್ಲಿ ಇವನ್ನು ಬಿಡುವುದರಲ್ಲಿಯೇ ಪರಿಶ್ರಮವಾಗುತ್ತದೆ, ಪರಿಶ್ರಮವಿಲ್ಲದೆ ವಿಶ್ವದ ರಾಜ್ಯಭಾಗ್ಯವು ಸಿಗುವುದಿಲ್ಲ. ತಂದೆಯನ್ನು ನೆನಪು ಮಾಡಿದಾಗಲೇ ನೀವು ತಮಗೆ ರಾಜ್ಯ ತಿಲಕವನ್ನು ಇಟ್ಟುಕೊಳ್ಳುತ್ತೀರಿ ಅರ್ಥಾತ್ ರಾಜಧಾನಿಗೆ ಅಧಿಕಾರಿಗಳಾಗುತ್ತೀರಿ. ಎಷ್ಟು ಚೆನ್ನಾಗಿ ನೆನಪಿನಲ್ಲಿರುತ್ತೀರೋ, ಶ್ರೀಮತದಂತೆ ನಡೆಯುತ್ತೀರೋ ಅಷ್ಟು ನೀವು ರಾಜರಿಗೂ ರಾಜರಾಗುತ್ತೀರಿ. ಓದಿಸುವಂತಹ ಶಿಕ್ಷಕರು ಓದಿಸಲು ಬಂದಿದ್ದಾರೆ, ಇದು ಮನುಷ್ಯರಿಂದ ದೇವತೆಯಾಗುವ ಪಾಠಶಾಲೆಯಾಗಿದೆ. ತಂದೆಯು ನರನಿಂದ ನಾರಾಯಣನಾಗುವ ಕಥೆಯನ್ನು ತಿಳಿಸುತ್ತಾರೆ. ಈ ಕಥೆಯು ಎಷ್ಟು ಪ್ರಸಿದ್ಧವಾಗಿದೆ! ಇದಕ್ಕೆ ಅಮರ ಕಥೆ, ಸತ್ಯ ನಾರಾಯಣನ ಕಥೆ, ಮೂರನೇ ನೇತ್ರದ ಕಥೆಯೆಂತಲೂ ಹೇಳುತ್ತಾರೆ. ಮೂರರ ಅರ್ಥವನ್ನೂ ತಂದೆಯು ತಿಳಿಸುತ್ತಾರೆ. ಭಕ್ತಿಮಾರ್ಗದ ಕಥೆಗಳು ಬಹಳಷ್ಟಿದೆ. ಅಂದಾಗ ನೋಡಿ, ಈ ಗೀತೆಯು ಎಷ್ಟು ಚೆನ್ನಾಗಿದೆ! ಬಾಬಾ, ನಮ್ಮನ್ನು ಇಡೀ ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ ಯಾವ ಮಾಲೀಕತ್ವವನ್ನು ಯಾರೂ ಲೂಟಿ ಮಾಡಲು ಸಾಧ್ಯವಿಲ್ಲ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:

1. ಸದಾ ಈ ಸ್ಮೃತಿಯನ್ನಿಟ್ಟುಕೊಳ್ಳಬೇಕು - ನಾವು ಒಂದು ಮತ, ಒಂದು ರಾಜ್ಯ, ಒಂದು ಧರ್ಮದ ಸ್ಥಾಪನೆಗೆ ನಿಮಿತ್ತರಾಗಿದ್ದೇವೆ, ಆದ್ದರಿಂದ ಏಕಮತ ವಾಗಿರಬೇಕಾಗಿದೆ.

2. ಸ್ವಯಂಗೆ ರಾಜ್ಯ ತಿಲಕವನ್ನು ಇಟ್ಟುಕೊಳ್ಳಲು ವಿಕಾರಗಳನ್ನು ಬಿಡುವ ಪರಿಶ್ರಮ ಪಡಬೇಕಾಗಿದೆ. ವಿದ್ಯೆಯ ಮೇಲೆ ಪೂರ್ಣ ಗಮನ ಕೊಡಬೇಕಾಗಿದೆ.

ವರದಾನ:

ತ್ರಿಕಾಲದರ್ಶಿ ಸ್ಥಿತಿಯ ಮುಖಾಂತರ ಮಾಯೆಯ ಯುದ್ಧದಿಂದ ಸುರಕ್ಷಿತರಾಗಿರುವಂತಹ ಅತೀಂದ್ರಿಯ ಸುಖದ ಅಧಿಕಾರಿ ಭವ.

ಸಂಗಮಯುಗದ ವಿಶೇಷ ವರದಾನ ಅಥವಾ ಬ್ರಾಹ್ಮಣ ಜೀವನದ ವಿಶೇಷತೆಯಾಗಿದೆ -ಅತೀಂದ್ರಿಯ ಸುಖ. ಈ ಅನುಭವ ಬೇರೆ ಯಾವುದೇ ಯುಗದಲ್ಲಿಯು ಸಹ ಆಗುವುದಿಲ್ಲ. ಆದರೆ ಈ ಸುಖದ ಅನುಭೂತಿಗಾಗಿ ತ್ರಿಕಾಲದರ್ಶಿ ಸ್ಥಿತಿಯ ಮುಖಾಂತರ ಮಾಯೆಯ ಯುದ್ಧದಿಂದ ಸುರಕ್ಷಿತರಾಗಿರಿ. ಒಂದುವೇಳೆ ಪದೇ-ಪದೇ ಮಾಯೆಯ ಯುದ್ಧ ನಡೆಯುತ್ತಲೇ ಇದೆ ಎಂದಾಗ ಬಯಸಿದರೂ ಸಹ ಅತೀಂದ್ರಿಯ ಸುಖದ ಅನುಭವ ಮಾಡಲು ಸಾಧ್ಯವಿಲ್ಲ. ಯಾರು ಅತೀಂದ್ರಿಯ ಸುಖದ ಅನುಭವ ಮಾಡುತ್ತಾರೆ, ಅವರಿಗೆ ಇಂದ್ರಿಯಗಳ ಸುಖ ಆಕರ್ಷಣೆ ಮಾಡಲು ಸಾಧ್ಯವಿಲ್ಲ, ಜ್ಞಾನ ಪೂರ್ಣರಾಗಿರುವ ಕಾರಣ ಅವರ ಮುಂದೆ ಅದೆಲ್ಲವು ತುಚ್ಛವಾಗಿ ಕಂಡು ಬರುವುದು.

ಸ್ಲೋಗನ್:

ಕರ್ಮ ಮತ್ತು ಮನಸಾ ಎರಡೂ ಸೇವೆಯ ಬ್ಯಾಲೆನ್ಸ್ ಇದ್ದಾಗ ಶಕ್ತಿಶಾಲಿ ವಾಯುಮಂಡಲ ರಚನೆ ಮಾಡಲು ಸಾಧ್ಯ.