09.11.23         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ದೇಹಾಭಿಮಾನದಲ್ಲಿ ಬರುವುದರಿಂದ ಮಾಯೆಯ ಪೆಟ್ಟು ಬೀಳುತ್ತದೆ, ದೇಹೀ ಅಭಿಮಾನಿಯಾಗಿದ್ದಾಗ ತಂದೆಯ ಪ್ರತಿಯೊಂದು ಶ್ರೀಮತವನ್ನು ಪಾಲಿಸುತ್ತೀರಿ”

ಪ್ರಶ್ನೆ:
ತಂದೆಯ ಬಳಿ ಎರಡು ಪ್ರಕಾರದ ಪುರುಷಾರ್ಥಿ ಮಕ್ಕಳಿದ್ದಾರೆ, ಅವರು ಯಾರು?

ಉತ್ತರ:
ಒಂದು ರೀತಿ ಮಕ್ಕಳು ತಂದೆಯಿಂದ ಸಂಪೂರ್ಣ ಆಸ್ತಿಯನ್ನು ತೆಗೆದುಕೊಳ್ಳುವ ಪುರುಷಾರ್ಥವನ್ನು ಮಾಡುತ್ತಾರೆ, ಪ್ರತೀ ಹೆಜ್ಜೆಯಲ್ಲಿ ತಂದೆಯಿಂದ ಸಲಹೆಯನ್ನು ಪಡೆಯುತ್ತಿರುತ್ತಾರೆ. ಮತ್ತೊಂದು ರೀತಿಯ ಮಕ್ಕಳು ತಂದೆಗೆ ವಿಚ್ಚೇಧನ ಕೊಡುವಂತಹ ಪುರುಷಾರ್ಥ ಮಾಡುತ್ತಾರೆ. ಕೆಲವರು ದುಃಖದಿಂದ ಬಿಡುಗಡೆಯಾಗಲು ತಂದೆಯನ್ನು ಬಹಳ-ಬಹಳ ನೆನಪು ಮಾಡುತ್ತಾರೆ, ಮತ್ತೆ ಕೆಲವರು ದುಃಖದಲ್ಲಿ ಸಿಕ್ಕಿಹಾಕಿಕೊಳ್ಳಲು ಇಷ್ಟಪಡುತ್ತಾರೆ. ಇದೂ ಆಶ್ಚರ್ಯವಲ್ಲವೆ!

ಗೀತೆ:
ಮಹಾಸಭೆಯಲ್ಲಿ ಪರಂಜ್ಯೋತಿ ಬೆಳಗಿತು, ಪತಂಗಗಳಿಗಾಗಿ....

ಓಂ ಶಾಂತಿ.
ಮಕ್ಕಳು ಈ ಹಾಡನ್ನು ಬಹಳ ಸಾರಿ ಕೇಳಿದ್ದೀರಿ. ಹೊಸಮಕ್ಕಳು ಈಗ ಹೊಸದಾಗಿ ಕೇಳುತ್ತಾರೆ. ಯಾವಾಗ ತಂದೆಯು ಬರುತ್ತಾರೋ ಆಗ ತನ್ನ ಪರಿಚಯವನ್ನು ಕೊಡುತ್ತಾರೆ. ಮಕ್ಕಳಿಗೆ ತಂದೆಯ ಪರಿಚಯ ಸಿಕ್ಕಿದೆ. ನಾವೀಗ ಬೇಹದ್ದಿನ ತಾಯಿ-ತಂದೆಯ ಸಂತಾನರಾಗಿದ್ದೇವೆಂದು ತಿಳಿದುಕೊಂಡಿದ್ದಾರೆ. ಅವಶ್ಯವಾಗಿ ಮನುಷ್ಯ ಸೃಷ್ಟಿಯ ರಚೈತ ತಾಯಿ-ತಂದೆಯಿರಬೇಕು. ಆದರೆ ಮಾಯೆಯು ಮನುಷ್ಯರ ಬುದ್ಧಿಯನ್ನು ಸಂಪೂರ್ಣವಾಗಿ ಸಾಯಿಸಿಬಿಟ್ಟಿದೆ. ಇಷ್ಟು ಸಾಧಾರಣ ಮಾತೂ ಸಹ ಬುದ್ಧಿಯಲ್ಲಿ ಕುಳಿತುಕೊಳ್ಳುವುದಿಲ್ಲ. ನಮಗೆ ಭಗವಂತನೇ ಜನ್ಮಕೊಟ್ಟಿದ್ದಾರೆಂದು ಹೇಳುವುದೇನೋ ಹೇಳುತ್ತಾರೆ. ಅಂದಾಗ ಅವಶ್ಯವಾಗಿ ತಾಯಿ-ತಂದೆ ಇರಬೇಕಲ್ಲವೆ! ಭಕ್ತಿಮಾರ್ಗದಲ್ಲಿ ನೆನಪೂ ಸಹ ಮಾಡುತ್ತಾರೆ. ಪ್ರತೀ ಧರ್ಮದವರು ಪರಮಪಿತ ಪರಮಾತ್ಮನನ್ನು ತಪ್ಪದೇ ನೆನಪು ಮಾಡುತ್ತಾರೆ. ಸ್ವಯಂ ಭಕ್ತರಂತೂ ಭಗವಂತನಾಗಲು ಸಾಧ್ಯವಿಲ್ಲ. ಭಕ್ತರು ಭಗವಂತನಿಗಾಗಿ ಸಾಧನೆ ಮಾಡುತ್ತಾರೆ. ಪರಮಪಿತ ಪರಮಾತ್ಮನು ಎಲ್ಲರಿಗೂ ಒಬ್ಬರೆ ಆಗಿರಬೇಕು ಅರ್ಥಾತ್ ಸರ್ವ ಆತ್ಮಗಳಿಗೂ ತಂದೆ ಒಬ್ಬರೇ ಆಗಿದ್ದಾರೆ. ಸರ್ವಶರೀರಗಳ ತಂದೆ ಒಬ್ಬರೇ ಆಗಲು ಸಾಧ್ಯವಿಲ್ಲ. ಅವರು ಅನೇಕ ತಂದೆಯರಿದ್ದಾರೆ. ಶರೀರದ ತಂದೆಯಿದ್ದರೂ ಸಹ ಹೇ ಈಶ್ವರ ಎಂದು ನೆನಪು ಮಾಡುತ್ತಾರೆ. ಆದುದರಿಂದ ತಂದೆಯು ತಿಳಿಸುತ್ತಾರೆ - ಮನುಷ್ಯರು ತಿಳುವಳಿಕೆಯಿಲ್ಲದ ಕಾರಣ ತಂದೆಯ ಪರಿಚಯವನ್ನೇ ಮರೆತುಬಿಟ್ಟಿದ್ದಾರೆ. ಸ್ವರ್ಗದ ರಚಯಿತ ಅವಶ್ಯವಾಗಿ ಒಬ್ಬರೇ ಆಗಿದ್ದಾರೆಂದು ನೀವು ತಿಳಿದುಕೊಂಡಿದ್ದೀರಿ. ಇದು ಕಲಿಯುಗವಾಗಿದೆ, ಖಂಡಿತವಾಗಿ ಕಲಿಯುಗದ ವಿನಾಶವಾಗುತ್ತದೆ. ಪ್ರಾಯಃಲೋಪ ಎಂಬ ಅಕ್ಷರ ಪ್ರತೀ ಮಾತಿನಲ್ಲಿ ಬರುತ್ತದೆ. ಮಕ್ಕಳಿಗೆ ಗೊತ್ತಿದೆ - ಈಗ ಸತ್ಯಯುಗವು ಪ್ರಾಯಃಲೋಪವಾಗಿದೆ. ಒಳ್ಳೆಯದು, ಸತ್ಯಯುಗದಲ್ಲಿರುವವರಿಗೆ ಸತ್ಯಯುಗವು ಪ್ರಾಯಲೋಪವಾಗಿ ತ್ರೇತಾಯುಗವು ಬರುತ್ತದೆ ಎಂದು ಗೊತ್ತಿರುತ್ತದೆಯೇ? ಎಂಬ ಪ್ರಶ್ನೆಯು ಏಳುತ್ತದೆ. ಇಲ್ಲ, ಅವರಿಗೆ ಗೊತ್ತಿರುವುದಿಲ್ಲ. ಅಲ್ಲಿ ಅವರಿಗೆ ಈ ಜ್ಞಾನದ ಅವಶ್ಯಕತೆಯಿಲ್ಲ. ಸೃಷ್ಟಿಚಕ್ರ ಹೇಗೆ ತಿರುಗುತ್ತದೆ? ನಮ್ಮ ಪಾರಲೌಕಿಕ ತಂದೆಯಾರಾಗಿದ್ದಾರೆ? ಈ ಮಾತುಗಳು ಯಾರ ಬುದ್ಧಿಯಲ್ಲಿಯೂ ಬರುವುದಿಲ್ಲ. ಇದನ್ನು ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ಮನುಷ್ಯರು ನೀವು ತಾಯಿ-ತಂದೆ, ನಾವು ಮಕ್ಕಳಾಗಿದ್ದೇವೆಂದು ಮಹಿಮೆ ಮಾಡುತ್ತಾರೆ ಆದರೆ ಅವರನ್ನು ತಿಳಿದುಕೊಂಡಿಲ್ಲ. ಈ ರೀತಿ ಹೇಳುವುದೂ ಸಹ ಹೇಳದೇ ಇರುವುದಕ್ಕೆ ಸಮಾನವಾಗುತ್ತಿದೆ ಕೇವಲ ಸುಮ್ಮನೆ ಹೇಳುತ್ತಾರಷ್ಟೆ. ತಂದೆಯನ್ನು ಮರೆತಿರುವ ಕಾರಣ ಅನಾಥರಾಗಿಬಿಟ್ಟಿದ್ದಾರೆ. ತಂದೆಯು ಪ್ರತೀ ಮಾತನ್ನು ತಿಳಿಸುತ್ತಾರೆ. ಹೆಜ್ಜೆ-ಹೆಜ್ಜೆಯಲ್ಲಿಯೂ ಶ್ರೀಮತದಂತೆ ನಡೆಯಿರಿ, ಇಲ್ಲವಾದರೆ ಯಾವುದೇ ಸಮಯದಲ್ಲಿಯಾದರೂ ಮಾಯೆ ಬಹಳ ಮೋಸ ಮಾಡಿಬಿಡುತ್ತದೆ. ಮಾಯೆಯು ಮೋಸಗಾರನಾಗಿದೆ. ಮಾಯೆಯಿಂದ ಬಿಡುಗಡೆ ಮಾಡುವುದು ತಂದೆಯದೇ ಕೆಲಸವಾಗಿದೆ. ರಾವಣನಂತೂ ದುಃಖ ಕೊಡುತ್ತಾನೆ, ತಂದೆಯು ಸುಖ ಕೊಡುತ್ತಾರೆ. ಮನುಷ್ಯರು ಈ ಮಾತುಗಳನ್ನು ತಿಳಿದುಕೊಂಡಿಲ್ಲ. ಮನುಷ್ಯರಂತೂ ದುಃಖ-ಸುಖವನ್ನು ಭಗವಂತನೇ ಕೊಡುತ್ತಾರೆಂದು ತಿಳಿದುಕೊಂಡಿದ್ದಾರೆ. ಆದರೆ ತಂದೆಯು ಹೇಳುತ್ತಾರೆ - ಮನುಷ್ಯರು ದುಃಖಿಗಳಾಗಲು ವಿವಾಹದಲ್ಲಿ ಎಷ್ಟೊಂದು ಖರ್ಚು ಮಾಡುತ್ತಾರೆ, ಪವಿತ್ರ ಹುಟ್ಟುವಳಿಯನ್ನು ಅಪವಿತ್ರ ಮಾಡುವ ಪುರುಷಾರ್ಥ ಮಾಡಲಾಗುತ್ತದೆ. ಈ ಮಾತುಗಳನ್ನು ನೀವು ಮಾತ್ರ ತಿಳಿದುಕೊಂಡಿದ್ದೀರಿ, ಪ್ರಪಂಚದವರು ತಿಳಿದುಕೊಂಡಿಲ್ಲ. ಈ ವಿಷಯಸಾಗರದಲ್ಲಿ ಮುಳುಗಲು ಎಷ್ಟೊಂದು ಸಮಾರಂಭಗಳನ್ನು ಮಾಡುತ್ತಾರೆ. ಅವರಿಗೆ ಸತ್ಯಯುಗದಲ್ಲಿ ವಿಷ(ವಿಕಾರ)ವಿರುವುದಿಲ್ಲವೆಂದು ಗೊತ್ತಿಲ್ಲ. ಅದನ್ನು ಕ್ಷೀರಸಾಗರವೆಂದು ಕರೆಯಲಾಗುವುದು, ಇದನ್ನು ವಿಷಯಸಾಗರವೆಂದು ಕರೆಯಲಾಗುವುದು. ಅದು (ಸತ್ಯಯುಗ) ಸಂಪೂರ್ಣ ನಿರ್ವಿಕಾರಿ ಪ್ರಪಂಚವಾಗಿದೆ, ಭಲೇ ಒಂದುವೇಳೆ ತ್ರೇತಾಯುಗದಲ್ಲಿ 2 ಕಲೆಗಳು ಕಡಿಮೆಯಾದರೂ ಸಹ ಅದನ್ನೂ ಸಹ ನಿರ್ವಿಕಾರಿ ಪ್ರಪಂಚವೆಂದು ಕರೆಯಲಾಗುವುದು. ಅಲ್ಲಿ ವಿಕಾರಿಗಳಿರಲು ಸಾಧ್ಯವಿಲ್ಲ ಏಕೆಂದರೆ ರಾವಣರಾಜ್ಯವು ದ್ವಾಪರದಿಂದ ಪ್ರಾರಂಭವಾಗುತ್ತದೆ. ಅರ್ಧ-ಅರ್ಧ ಅಲ್ಲವೆ. ಜ್ಞಾನಸಾಗರ ಮತ್ತು ಅಜ್ಞಾನಸಾಗರ. ಅಜ್ಞಾನದ ಸಾಗರವೂ ಇದೆಯಲ್ಲವೆ.

ಮನುಷ್ಯರು ಎಷ್ಟೊಂದು ಅಜ್ಞಾನಿಗಳಾಗಿದ್ದಾರೆ. ತಂದೆಯನ್ನು ತಿಳಿದುಕೊಂಡಿಲ್ಲ, ಇಂತಹದ್ದನ್ನು ಮಾಡಿದರೆ ಭಗವಂತ ಸಿಗುತ್ತಾರೆಂದು ಸುಮ್ಮನೆ ಹೇಳುತ್ತಾರೆ ಆದರೆ ಏನೂ ಸಿಗುವುದಿಲ್ಲ. ಕಷ್ಟಪಡುತ್ತಾ-ಪಡುತ್ತಾ ದುಃಖಿ, ನಿಧನಿಕರಾಗಿಬಿಡುತ್ತಾರೆ ಆಗ ನಾನು ದಣಿ ಬರುತ್ತೇನೆ. ದಣಿಯಿಲ್ಲದೆ ಮಾಯಾ ಹೆಬ್ಬಾವು ಎಲ್ಲರನ್ನು ತಿಂದುಬಿಟ್ಟಿದೆ. ತಂದೆಯು ತಿಳಿಸುತ್ತಾರೆ - ಮಾಯೆಯು ಬಹಳ ಭಯಂಕರವಾಗಿದೆ. ಅನೇಕರಿಗೆ ಮೋಸವನ್ನೂ ಮಾಡುತ್ತದೆ. ಕೆಲವರಿಗೆ ಕಾಮದ ಪೆಟ್ಟು, ಕೆಲವರಿಗೆ ಮೋಹದ ಪೆಟ್ಟುಬೀಳುತ್ತದೆ. ದೇಹಾಭಿಮಾನದಲ್ಲಿ ಬಂದಾಗ ಪೆಟ್ಟುಬೀಳುತ್ತದೆ. ಆತ್ಮಾಭಿಮಾನಿಯಾಗುವುದರಲ್ಲಿ ಪರಿಶ್ರಮವಿದೆ. ತಂದೆಯು ಮತ್ತೆ ಮತ್ತೆ ಹೇಳುತ್ತಾರೆ - ಮಕ್ಕಳೇ, ಎಚ್ಚರಿಕೆ. ಮನ್ಮನಾಭವ. ತಂದೆಯನ್ನು ನೆನಪು ಮಾಡದಿದ್ದರೆ ಮಾಯೆಯು ಪೆಟ್ಟುಕೊಡುತ್ತದೆ. ಆದುದರಿಂದ ನಿರಂತರ ನೆನಪಿನಲ್ಲಿರುವ ಅಭ್ಯಾಸ ಮಾಡಿ. ಇಲ್ಲವೆಂದರೆ ಮಾಯೆ ಉಲ್ಟಾ ಕರ್ತವ್ಯವನ್ನು ಮಾಡಿಸುತ್ತದೆ. ನಿಮಗೆ ತಪ್ಪು-ಸರಿಯೆಂಬ ಬುದ್ಧಿ ದೊರೆತಿದೆಯಲ್ಲವೆ. ಏನಾದರೂ ಗೊಂದಲವಿದ್ದರೆ ತಂದೆಯನ್ನು ಕೇಳಿ. ದೂರವಾಣಿ, ಪತ್ರಗಳ ಮೂಲಕ, ಟೆಲಿಗ್ರಾಂ ನಲ್ಲಿಯೂ ಕೇಳಬಹುದು. ಬೆಳಗ್ಗೆ-ಬೆಳಗ್ಗೆ ಫೋನ್ ತಕ್ಷಣ ಸಿಗುತ್ತದೆ ಏಕೆಂದರೆ ನಿಮ್ಮನ್ನು ಬಿಟ್ಟು ಬಾಕಿ ಎಲ್ಲರೂ ಮಲಗಿರುತ್ತಾರೆ. ಆದ್ದರಿಂದ ಫೋನ್ನಲ್ಲಿಯೂ ನೀವು ಕೇಳಬಹುದು. ದಿನ-ಪ್ರತಿದಿನ ಫೋನ್ ಮೊದಲಾದುವುಗಳನ್ನು ಸುಧಾರಣೆ ಮಾಡುತ್ತಿರುತ್ತಾರೆ ಆದರೆ ಸರ್ಕಾರದಲ್ಲಿ ಬಡತನವಿದೆ. ಆದ್ದರಿಂದ ಅದೇ ರೀತಿ ಖರ್ಚು ಮಾಡುತ್ತದೆ. ಈ ಸಮಯದಲ್ಲಂತೂ ಎಲ್ಲವೂ ನಿಸ್ಸಾರ ಸ್ಥಿತಿಯುಳ್ಳ ತಮೋಪ್ರಧಾನವಾಗಿವೆ. ಅದರಲ್ಲಿಯೂ ವಿಶೇಷ ಭಾರತವಾಸಿಗಳಿಗೆ ರಜೋ, ತಮೋ ಗುಣವೆಂದು ಏಕೆ ಕರೆಯಲಾಗುತ್ತದೆ? ಏಕೆಂದರೆ ಇವರೇ ಎಲ್ಲರಿಗಿಂತ ಹೆಚ್ಚು ಸತೋಪ್ರಧಾನದವರು ಆಗಿದ್ದರು. ಬೇರೆ ಧರ್ಮದವರು ಅಷ್ಟೊಂದು ಸುಖವನ್ನೂ ನೋಡಲಿಲ್ಲ, ಅಷ್ಟೊಂದು ದುಃಖವನ್ನೂ ನೋಡುವುದಿಲ್ಲ, ಈಗ ಅವರು ಬಹಳ ಸುಖಿಗಳಾಗಿದ್ದಾರೆ ಆದ್ದರಿಂದ ಅವರು ಎಷ್ಟೊಂದು ಧಾನ್ಯಗಳನ್ನು ಕಳುಹಿಸುತ್ತಾರೆ ಏಕೆಂದರೆ ಅವರ ಬುದ್ಧಿಯು ರಜೋಪ್ರಧಾನವಾಗಿದೆ. ವಿನಾಶಕ್ಕೋಸ್ಕರ ಎಷ್ಟೊಂದು ಅನ್ವೇಷಣೆಗಳನ್ನು ಮಾಡುತ್ತಾರೆ. ಆದರೆ ಅವರಿಗೆ ಗೊತ್ತಾಗದ ಕಾರಣ ಅವರಿಗೆ ಬಹಳ ಚಿತ್ರಗಳು ಮುಂತಾದವನ್ನು ಕಳುಹಿಸಬೇಕಾಗುತ್ತದೆ. ಒಂದುದಿನ ಅವರಿಗೂ ಗೊತ್ತಾಗುತ್ತದೆ - ಈ ವಸ್ತು ಚೆನ್ನಾಗಿದೆ ಎಂದು ಕೊನೆಗೆ ತಿಳಿದುಕೊಳ್ಳುತ್ತಾರೆ. ಇದರ ಮೇಲೆ ಈಶ್ವರೀಯ ಉಡುಗೊರೆಯೆಂದು ಬರೆಯಲ್ಪಟ್ಟಿದೆ. ಯಾವಾಗ ಆಪತ್ತಿನ ಸಮಯ ಬರುತ್ತದೆಯೋ ಆಗ ಈ ಸಂದೇಶದ ಪ್ರಭಾವ ಬೀರುತ್ತದೆ. ಇದು ನಮಗೆ ಮೊದಲೇ ಸಿಕ್ಕಿತ್ತು ಎಂದು ಹೇಳುತ್ತಾರೆ. ಈ ಚಿತ್ರಗಳಿಂದ ಬಹಳ ಉಪಯೋಗವಾಗುತ್ತವೆ. ಪಾಪ ಅವರು ತಂದೆಯನ್ನು ತಿಳಿದುಕೊಂಡಿಲ್ಲ. ಒಬ್ಬ ತಂದೆಯೆ ಸುಖದಾತನಾಗಿದ್ದಾರೆ, ಎಲ್ಲರೂ ಅವರನ್ನು ನೆನಪು ಮಾಡುತ್ತಾರೆ. ಚಿತ್ರಗಳಿಂದ ಚೆನ್ನಾಗಿ ತಿಳಿದುಕೊಳ್ಳಬಹುದು. ಈಗ ನೋಡಿ, ನಿಮಗೆ ಮೂರು ಹೆಜ್ಜೆ ಭೂಮಿಯೂ ಸಿಗುವುದಿಲ್ಲ ಆದರೆ ನಂತರ ನೀವು ಇಡೀ ವಿಶ್ವದ ಮಾಲೀಕರಾಗಿಬಿಡುತ್ತೀರಿ. ಈ ಚಿತ್ರಗಳು ವಿದೇಶದಲ್ಲಿ ಬಹಳ ಸೇವೆಯನ್ನು ಮಾಡುತ್ತವೆ. ಆದರೆ ಮಕ್ಕಳಿಗೆ ಈ ಚಿತ್ರಗಳ ಬೆಲೆ ತಿಳಿದಿಲ್ಲ. ಖರ್ಚಂತೂ ಆಗುತ್ತದೆ. ರಾಜಧಾನಿಯನ್ನು ಸ್ಥಾಪನೆ ಮಾಡುವಾಗ ಆ ಸರ್ಕಾರಕ್ಕೆ ಕೋಟ್ಯಾಂತರ ರೂ.ಗಳು ಖರ್ಚಾಗಿರಬೇಕು. ಲಕ್ಷಾಂತರ ಜನ ಸತ್ತಿರಬೇಕು. ಇಲ್ಲಂತೂ ಸಾಯುವ ಮಾತೇ ಇಲ್ಲ. ಇಲ್ಲಿ ಶ್ರೀಮತದಂತೆ ಪೂರ್ಣ ಪುರುಷಾರ್ಥ ಮಾಡಬೇಕು ಆಗ ಶ್ರೇಷ್ಠ ಪದವಿಯನ್ನು ಪಡೆಯಲು ಸಾಧ್ಯ. ಇಲ್ಲವೆಂದರೆ ಅಂತ್ಯದಲ್ಲಿ ಶಿಕ್ಷೆ ತಿನ್ನುವ ಸಮಯದಲ್ಲಿ ಬಹಳ ಪಶ್ಚಾತ್ತಾಪ ಪಡುತ್ತೀರಿ. ಇವರು ತಂದೆಯೂ ಆಗಿದ್ದಾರೆ, ಧರ್ಮರಾಜನೂ ಆಗಿದ್ದಾರೆ. ನಾನು ಪತಿತ ಪ್ರಪಂಚದಲ್ಲಿ ಬಂದು ಮಕ್ಕಳಿಗೆ 21 ಜನ್ಮಗಳಿಗೆ ಸ್ವರಾಜ್ಯ ಕೊಡುತ್ತೇನೆ. ಒಂದುವೇಳೆ ನಂತರ ನೀವು ವಿನಾಶಕಾರಿ ಕರ್ತವ್ಯವನ್ನು ಮಾಡಿದರೆ ಪೂರ್ತಿ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ಏನು ಆಗುತ್ತದೆಯೋ ಅದನ್ನು ನೋಡಿಕೊಳ್ಳೋಣ, ಮುಂದಿನ ಜನ್ಮವನ್ನು ಕುರಿತು ಯಾರು ಯೋಚನೆ ಮಾಡುತ್ತಾರೆ ಎಂದು ತಿಳಿದುಕೊಳ್ಳಬಾರದು. ಮನುಷ್ಯರು ದಾನ-ಪುಣ್ಯವನ್ನೂ ಮತ್ತೊಂದು ಜನ್ಮಕ್ಕಾಗಿ ಮಾಡುತ್ತಾರೆ. ನೀವೂ ಸಹ ಈಗ ಏನು ಮಾಡುತ್ತಿರುವರೋ ಅದು 21 ಜನ್ಮಗಳಿಗಾಗಿ ಮಾಡುತ್ತೀರಿ. ಅವರು ಏನು ಮಾಡುತ್ತಾರೋ ಅದು ಅಲ್ಪಕಾಲಕ್ಕೋಸ್ಕರ. ಅದರ ಪ್ರತಿಫಲ ನರಕದಲ್ಲಿಯೇ ಸಿಗುತ್ತದೆ. ನಿಮಗೆ ಸ್ವರ್ಗದಲ್ಲಿ ಪ್ರತಿಫಲ ಸಿಗುತ್ತದೆ. ನಿಮಗೂ ಅವರಿಗೂ ಹಗಲು-ರಾತ್ರಿಯ ಅಂತರವಿದೆ. ನೀವು ಸ್ವರ್ಗದಲ್ಲಿ 21 ಜನ್ಮಗಳಿಗಾಗಿ ಪ್ರಾಲಬ್ಧ ಪಡೆಯುತ್ತೀರಿ. ಪ್ರತೀ ಮಾತಿನಲ್ಲಿ ಶ್ರೀಮತದಂತೆ ನಡೆದಾಗ ನಿಮ್ಮ ಹಡಗು ಪಾರಾಗುತ್ತದೆ. ಮಕ್ಕಳನ್ನು ನಯನಗಳ ಮೇಲೆ ಕೂರಿಸಿಕೊಂಡು ಬಹಳ ಸುಖವಾಗಿ ಕರೆದುಕೊಂಡು ಹೋಗುತ್ತೇನೆಂದು ತಂದೆಯು ಹೇಳುತ್ತಾರೆ. ನೀವು ಬಹಳ ದುಃಖವನ್ನು ಅನುಭವಿಸಿದ್ದೀರಿ. ಈಗ ನಾನು ಹೇಳುತ್ತೇನೆ - ನೀವು ನನ್ನನ್ನು ನೆನಪು ಮಾಡಿ. ನೀವು ಅಶರೀರಿಯಾಗಿ ಬಂದಿದ್ದೀರಿ, ಈಗ ಪಾತ್ರವನ್ನು ಅಭಿನಯಿಸಿದ್ದೀರಿ. ಈಗ ಮತ್ತೆ ಹಿಂತಿರುಗಬೇಕಾಗಿದೆ. ಇದು ನಿಮ್ಮ ಅವಿನಾಶಿ ಪಾತ್ರವಾಗಿದೆ. ಈ ಮಾತುಗಳನ್ನು ಯಾವುದೇ ವಿಜ್ಞಾನದ ಅಹಂ ಉಳ್ಳವರು ತಿಳಿದುಕೊಳ್ಳುವುದಿಲ್ಲ. ಆತ್ಮ ಎಷ್ಟೊಂದು ಚಿಕ್ಕ ನಕ್ಷತ್ರವಾಗಿದೆ. ಅದರಲ್ಲಿ ಸದಾಕಾಲ ಅವಿನಾಶಿ ಪಾತ್ರವು ತುಂಬಲ್ಪಟ್ಟಿದೆ. ಇದೆಂದಿಗೂ ಸಮಾಪ್ತಿಯಾಗುವುದಿಲ್ಲ ತಂದೆಯೂ ಸಹ ಹೇಳುತ್ತಾರೆ - ನಾನು ರಚೈತ ಹಾಗೂ ಪಾತ್ರಧಾರಿಯಾಗಿದ್ದೇನೆ. ನಾನು ಕಲ್ಪ-ಕಲ್ಪವೂ ಪಾತ್ರವನ್ನು ಅಭಿನಯಿಸಲು ಬರುತ್ತೇನೆ. ಪರಮಾತ್ಮ ಮನ-ಬುದ್ಧಿಯ ಸಹಿತ ಜ್ಞಾನಪೂರ್ಣರಾಗಿದ್ದಾರೆಂದು ಹೇಳುತ್ತಾರೆ, ಆದರೆ ಅವರು ಏನಾಗಿದ್ದಾರೆಂದು ತಿಳಿದುಕೊಂಡಿಲ್ಲ ಹೇಗೆ ನೀವು ಆತ್ಮರು ನಕ್ಷತ್ರ ಸಮಾನವಾಗಿದ್ದೀರಿ, ನಾನೂ ಸಹ ನಕ್ಷತ್ರದಂತೆ ಇದ್ದೇನೆ. ಭಕ್ತಿಮಾರ್ಗದಲ್ಲಿಯೂ ನನ್ನನ್ನು ನೆನಪು ಮಾಡುತ್ತಾರೆ ಏಕೆಂದರೆ ದುಃಖಿಗಳಾಗಿದ್ದಾರೆ ಆದ್ದರಿಂದ ನಾನು ಬಂದು ಮಕ್ಕಳನ್ನು ಜೊತೆಯಲ್ಲಿ ಕರೆದುಕೊಂಡು ಹೋಗುತ್ತೇನೆ. ನಾನೂ ಸಹ ಮಾರ್ಗದರ್ಶಕನಾಗಿದ್ದೇನೆ. ನಾನು ಪರಮಾತ್ಮ ನೀವು ಮಕ್ಕಳನ್ನು ಕರೆದುಕೊಂಡು ಹೋಗುತ್ತೇನೆ. ಆತ್ಮ ಸೊಳ್ಳೆಗಿಂತಲೂ ಚಿಕ್ಕದಾಗಿದೆ. ಈ ತಿಳುವಳಿಕೆಯು ಈಗ ಮಾತ್ರವೇ ನಿಮಗೆ ಸಿಗುತ್ತದೆ. ಎಷ್ಟೊಂದು ಚೆನ್ನಾಗಿ ತಿಳಿಸಿಕೊಡುತ್ತಾರೆ. ತಂದೆಯು ಹೇಳುತ್ತಾರೆ - ನಿಮ್ಮನ್ನು ವಿಶ್ವದ ಮಾಲೀಕರನ್ನಾಗಿ ಮಾಡುತ್ತೇನೆ. ಬಾಕಿ ದಿವ್ಯದೃಷ್ಟಿಯ ಕೀಲಿಕೈಯನ್ನು ನಾನು ನನ್ನ ಬಳಿಯೇ ಇಟ್ಟುಕೊಳ್ಳುತ್ತೇನೆ ಇದನ್ನು ನಾನು ಯಾರಿಗೂ ಕೊಡುವುದಿಲ್ಲ. ಇದು ಭಕ್ತಿಮಾರ್ಗದಲ್ಲಿ ನನ್ನ ಕಾರ್ಯದಲ್ಲಿ ಉಪಯೋಗವಾಗುತ್ತದೆ. ತಂದೆಯು ಹೇಳುತ್ತಾರೆ - ನಾನು ನಿಮ್ಮನ್ನು ಪಾವನ, ಪೂಜ್ಯರನ್ನಾಗಿ ಮಾಡುತ್ತೇನೆ, ಮಾಯೆಯು ಪತಿತ, ಪೂಜಾರಿಯನ್ನಾಗಿ ಮಾಡುತ್ತದೆ. ಅಂದಾಗ ಬಹಳಷ್ಟು ತಿಳಿಸಲಾಗುತ್ತದೆ ಆದರೆ ಯಾರಾದರೂ ಬುದ್ಧಿವಂತರು ಇದನ್ನು ತಿಳಿದುಕೊಳ್ಳಬೇಕು.

ಟೇಪ್ರೆಕಾರ್ಡರ್ ಬಹಳ ಒಳ್ಳೆಯ ಸಾಧನವಾಗಿದೆ. ಮಕ್ಕಳು ಮುರುಳಿಯನ್ನಂತೂ ಅವಶ್ಯವಾಗಿ ಕೇಳಬೇಕು. ಬಹಳ ಅಗಲಿಹೋಗಿರುವ ಮಕ್ಕಳಿದ್ದಾರೆ. ಬಾಬಾರವರಿಗೆ ಬಂಧನದಲ್ಲಿರುವ ಗೋಪಿಕೆ (ಮಾತೆ)ಯರ ಮೇಲೆ ಬಹಳ ದಯೆಬರುತ್ತದೆ. ಅವರು ಬಾಬಾನ ಈ ಮುರುಳಿಯನ್ನು ಕೇಳಿ ಬಹಳ ಖುಷಿಯಾಗುತ್ತಾರೆ. ಮಕ್ಕಳ ಖುಷಿಗಾಗಿ ಏನನ್ನಾದರೂ ಏಕೆ ಮಾಡಬಾರದು? ಬಾಬಾರವರಂತೂ ಹಗಲು-ರಾತ್ರಿ ಹಳ್ಳಿಯಲ್ಲಿರುವ ಮಾತೆಯರನ್ನು ಕುರಿತು ಚಿಂತೆ ಇರುತ್ತದೆ. ನಿದ್ರೆಯೂ ಹೊರಟು ಹೋಗುತ್ತದೆ. ಮಕ್ಕಳನ್ನು ದುಃಖದಿಂದ ಬಿಡಿಸಲು ಯಾವ ಯುಕ್ತಿ ಮಾಡೋಣವೆಂದು ತಂದೆಯು ಯೋಚಿಸುತ್ತಾರೆ. ಕೆಲವರಂತೂ ದುಃಖದಲ್ಲಿ ಸಿಕ್ಕಿಹಾಕಿಕೊಳ್ಳಲು ತಯಾರಿ ಮಾಡಿಕೊಳ್ಳುತ್ತಾರೆ. ಕೆಲವರಂತೂ ಆಸ್ತಿ ತೆಗೆದುಕೊಳ್ಳುವ ಪುರುಷಾರ್ಥ ಮಾಡುತ್ತಾರೆ. ಮತ್ತೆ ಕೆಲವರು ತಂದೆಗೆ ವಿಚ್ಛೇದನ ಕೊಡುವ ಪುರುಷಾರ್ಥ ಮಾಡುತ್ತಾರೆ. ಪ್ರಪಂಚವಂತೂ ಇಂದು ಬಹಳ ಕೆಟ್ಟುಹೋಗಿದೆ. ಕೆಲವು ಮಕ್ಕಳು ತಂದೆಯನ್ನೇ ಹೊಡೆಯಲು ಹಿಂದೂ ಮುಂದು ನೋಡುವುದಿಲ್ಲ. ಬೇಹದ್ದಿನ ತಂದೆಯು ಎಷ್ಟೊಂದು ಚೆನ್ನಾಗಿ ತಿಳಿಸುತ್ತಾರೆ. ನಾನು ಮಕ್ಕಳಿಗೆ ಇಷ್ಟೊಂದು ಹಣಕೊಡುತ್ತೇನೆ, ಅವರು ಎಂದಿಗೂ ದುಃಖಿಯಾಗುವುದಿಲ್ಲ. ಹಾಗೆಯೇ ಮಕ್ಕಳಿಗೂ ಸಹ ಎಲ್ಲರಿಗೂ ಸುಖದ ಮಾರ್ಗವನ್ನು ತೋರಿಸಲು ದಯಾಹೃದಯಿ ಆಗಬೇಕು. ಇಂದು ಎಲ್ಲರೂ ದುಃಖ ಕೊಡುವವರೇ ಆಗಿದ್ದಾರೆ. ಕೇವಲ ಶಿಕ್ಷಕನು ಮಾತ್ರ ಎಂದಿಗೂ ದುಃಖದ ಮಾರ್ಗವನ್ನು ತೋರಿಸುವುದಿಲ್ಲ. ಅವರು ಓದಿಸುತ್ತಾರೆ, ಓದು ಸಂಪಾದನೆಗೆ ಮೂಲ. ಓದಿನಿಂದ ಶರೀರ ನಿರ್ವಹಣೆ ಮಾಡಲು ಯೋಗ್ಯರಾಗುತ್ತಾರೆ. ತಾಯಿ-ತಂದೆಯಿಂದ ಆಸ್ತಿ ಸಿಗಬಹುದು ಆದರೆ ಅದು ಯಾವ ಕೆಲಸಕ್ಕೆ ಬರುತ್ತದೆ? ಎಷ್ಟು ಹಣವಿರುತ್ತದೆಯೋ ಅಷ್ಟು ಪಾಪ ಮಾಡುತ್ತಿರುತ್ತಾರೆ. ಇಲ್ಲದಿದ್ದರೆ ತೀರ್ಥಯಾತ್ರೆ ಮಾಡಲು ಬಹಳ ನಮ್ರತೆಯಿಂದ ಹೋಗುತ್ತಾರೆ. ಅದರೆ ಕೆಲವರು ತೀರ್ಥಯಾತ್ರೆಗಳಿಗೂ ಮಧ್ಯಪಾನಗಳನ್ನು ಸೇವಿಸಲು ತೆಗೆದುಕೊಂಡು ಹೋಗುತ್ತಾರೆ. ಅಲ್ಲಿ ಬಚ್ಚಿಟ್ಟುಕೊಂಡು ಸೇವಿಸುತ್ತಾರೆ. ಬಾಬಾ ಎಲ್ಲವನ್ನೂ ನೋಡಿದ್ದಾರೆ. ಮಧ್ಯಪಾನಗಳನ್ನು ಸೇವಿಸುವವರೂ ಸೇವಿಸದೇ ಇರುವುದಿಲ್ಲ, ಅದನ್ನಂತೂ ಕೇಳಲೇಬೇಡಿ. ಯುದ್ಧ ಮಾಡಲು ಹೋಗುವವರೂ ಸಹ ಬಹಳ ಮಧ್ಯಪಾನಗಳನ್ನು ಸೇವಿಸುತ್ತಾರೆ. ಯುದ್ಧ ಮಾಡುವವರಿಗೆ ತಮ್ಮ ಪ್ರಾಣದ ಬಗ್ಗೆ ಯೋಚನೆ ಇರುವುದಿಲ್ಲ. ತಿಳಿಯುತ್ತಾರೆ ಒಂದು ಶರೀರವನ್ನು ಬಿಟ್ಟು ಇನ್ನೊಂದು ಶರೀರವನ್ನು ತೆಗೆದುಕೊಳ್ಳುತ್ತೇವೆ, ಅವರಿಗೆ ಬೇರೆ ಯಾವುದೇ ಜ್ಞಾನವಿಲ್ಲ. ಆದರೆ ಸಾಯುವುದು ಮತ್ತು ಸಾಯಿಸುವುದು ಅವರಿಗೆ ಅಭ್ಯಾಸವಾಗಿಬಿಟ್ಟಿರುತ್ತದೆ. ಇಲ್ಲಂತೂ ನಾವು ಕುಳಿತಲ್ಲಿಯೇ ತಂದೆಯ ಬಳಿ ಹೋಗಲು ಇಷ್ಟಪಡುತ್ತೇವೆ. ಇದು ಹಳೆಯ ಪೊರೆಯಾಗಿದೆ. ಸರ್ಪವು ತನ್ನ ಹಳೆಯ ಪೊರೆಯನ್ನು ಬಿಟ್ಟುಬಿಡುತ್ತದೆ. ಶೀತದಲ್ಲಿ ಶುಷ್ಕವಾದಾಗ ಪೆÇರೆಯನ್ನು ಬಿಟ್ಟುಬಿಡುತ್ತದೆ. ನಿಮ್ಮದೂ ಸಹ ಇದು ಕೊಳಕು ಹಳೆಯ ಶರೀರವಾಗಿದೆ. ಪಾತ್ರ ಮಾಡುತ್ತಾ ಇದನ್ನು ಇಲ್ಲಿಯೇ ಬಿಟ್ಟು ಬಾಬಾನ ಬಳಿಗೆ ಹೋಗಬೇಕು. ಅದಕ್ಕಾಗಿ ಬಾಬಾ ಯುಕ್ತಿಯನ್ನು ತಿಳಿಸಿದ್ದಾರೆ - ಮನ್ಮನಾಭವ. ನನ್ನನ್ನು ನೆನಪು ಮಾಡಿ ಸಾಕು, ಹಾಗೆಯೇ ಕುಳಿತಲ್ಲಿಯೇ ಶರೀರವನ್ನು ಬಿಟ್ಟುಬಿಡುತ್ತೀರಿ. ಸನ್ಯಾಸಿಗಳೂ ಸಹ ಕುಳಿತಲ್ಲಿಯೇ ಶರೀರವನ್ನು ಬಿಟ್ಟು ಬಿಡುತ್ತಾರೆ ಏಕೆಂದರೆ ಅವರು ಆತ್ಮನು ಬ್ರಹ್ಮನಲ್ಲಿ ಲೀನವಾಗುತ್ತೇನೆಂದು ತಿಳಿದು ಸಂಬಂಧವನ್ನು ಜೋಡಿಸಿ ಕುಳಿತುಕೊಳ್ಳುತ್ತಾರೆ ಆದರೆ ಯಾರೂ ಹೋಗುವುದಿಲ್ಲ. ಅದೇ ರೀತಿ ಕಾಶಿಕಲ್ವಟ್ನಲ್ಲಿ ಶಿವನಿಗೆ ಬಲಿಹಾರಿಯಾಗುತ್ತೇನೆಂದು ಜೀವಘಾತ ಮಾಡಿಕೊಳ್ಳುತ್ತಿದ್ದರು. ಹಾಗೆಯೇ ಈ ಸನ್ಯಾಸಿಗಳೂ ಸಹ ಕುಳಿತಲ್ಲಿಯೇ ಶರೀರವನ್ನು ಬಿಡುತ್ತಾರೆ. ಈ ತಂದೆಯು ನೋಡಿದ್ದಾರೆ, ಅದು ಹಠಯೋಗ ಸನ್ಯಾಸವಾಗಿದೆ.

ನಿಮಗೆ 84 ಜನ್ಮಗಳು ಹೇಗೆ ಸಿಗುತ್ತದೆ ಎಂದು ತಂದೆಯು ತಿಳಿಸುತ್ತಿದ್ದಾರೆ. ನಿಮಗೆ ಎಷ್ಟೊಂದು ಜ್ಞಾನ ಕೊಡುತ್ತಾರೆ ಆದರಲ್ಲಿ ಯಾರೋ ಕೆಲವರು ಮಾತ್ರ ಶ್ರೀಮತದಂತೆ ನಡೆಯುತ್ತಾರೆ. ದೇಹಾಭಿಮಾನದಲ್ಲಿ ಬರುವುದರಿಂದ ತಂದೆಗೇ ಸಹ ತಮ್ಮ ಮತವನ್ನು ಕೊಡಲು ಪ್ರಾರಂಭಿಸುತ್ತಾರೆ ತಂದೆಯು ತಿಳಿಸುತ್ತಾರೆ ದೇಹೀ ಅಭಿಮಾನಿಯಾಗಿ - ನಾನು ಆತ್ಮನಾಗಿದ್ದೇನೆ, ಬಾಬಾ ನೀವು ಜ್ಞಾನಸಾಗರರಾಗಿದ್ದೀರಿ. ಬಾಬಾ ನಿಮ್ಮ ಸಲಹೆಯಂತೆ ನಾನು ನಡೆಯುತ್ತೇನೆ ಹೆಜ್ಜೆ-ಹೆಜ್ಜೆಯಲ್ಲಿ ತುಂಬಾ ಎಚ್ಚರಿಕೆಯಿರಬೇಕು. ತಪ್ಪುಗಳು ಆಗುತ್ತಿರುತ್ತವೆ ಆದರೂ ಪುರುಷಾರ್ಥ ಮಾಡಬೇಕಾಗುತ್ತದೆ. ಎಲ್ಲಿಗೇ ಹೋಗಿ ಆದರೆ ತಂದೆಯನ್ನು ನೆನಪು ಮಾಡುತ್ತಿರಿ ಏಕೆಂದರೆ ಬಹಳ ವಿಕರ್ಮಗಳ ಹೊರೆ ತಲೆಯ ಮೇಲಿದೆ. ಕರ್ಮಭೋಗವನ್ನಂತೂ ಸಮಾಪ್ತಿ ಮಾಡಿಕೊಳ್ಳಬೇಕಾಗುತ್ತಲ್ಲವೇ. ಅಂತ್ಯದವರೆಗೆ ಈ ಕರ್ಮಭೋಗವು ಬಿಡುವುದಿಲ್ಲ. ಶ್ರೀಮತದಂತೆ ನಡೆಯುವುದರಿಂದ ಪಾರಸಬುದ್ಧಿಯವರಾಗುತ್ತೇವೆ. ತಂದೆಯ ಜೊತೆಯಲ್ಲಿ ಧರ್ಮರಾಜನೂ ಇದ್ದಾರೆ, ಅವರು ಜವಾಬ್ದಾರರಾಗುತ್ತಾರೆ. ತಂದೆಯು ಕುಳಿತಿರುವಾಗ ನಿಮ್ಮ ಮೇಲೆ ಏಕೆ ಜವಾಬ್ದಾರಿಯನ್ನು ಇಟ್ಟುಕೊಳ್ಳುತ್ತೀರಿ. ಪತಿತ-ಪಾವನ ತಂದೆಯು ಪತಿತರ ಸಭೆಯಲ್ಲಿಯೇ ಬರಲೇಬೇಕಾಗಿದೆ. ಇದು ಹೊಸ ಮಾತೇನಲ್ಲ. ಹೀಗೆ ಅನೇಕ ಬಾರಿ ಪಾತ್ರವನ್ನು ಅಭಿನಯಿಸಿದ್ದಾರೆ. ಅದೇ ರೀತಿ ಅಭಿನಯಿಸುತ್ತಿರುತ್ತಾರೆ. ಇದನ್ನೇ ಆಶ್ಚರ್ಯವೆಂದು ಹೇಳಲಾಗುವುದು. ಒಳ್ಳೆಯದು.

ಪಾರಲೌಕಿಕ ಬಾಪ್ದಾದಾರವರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳ ಪ್ರತಿ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ತಂದೆಯ ಆತ್ಮಿಕ ಮಕ್ಕಳಿಗೆ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ತಂದೆಯ ಸಮಾನ ಸರ್ವರನ್ನು ದುಃಖದಿಂದ ಬಿಡುಗಡೆ ಮಾಡುವ ದಯೆ ತೋರಿಸಬೇಕು. ಸುಖದ ಮಾರ್ಗವನ್ನು ತೋರಿಸಬೇಕು.

2. ಯಾವುದೇ ವಿನಾಶಕಾರಿ ಕರ್ತವ್ಯವನ್ನು ಮಾಡಬಾರದು. ಶ್ರೀಮತದಂತೆ 21 ಜನ್ಮಗಳಿಗಾಗಿ ತಮ್ಮ ಪ್ರಾಲಬ್ಧವನ್ನು ಮಾಡಿಕೊಳ್ಳಬೇಕು. ಹೆಜ್ಜೆ-ಹೆಜ್ಜೆಯಲ್ಲಿ ಎಚ್ಚರಿಕೆಯಿಂದ ನಡೆಯಬೇಕು.

ವರದಾನ:
ಭರವಸೆಗಳ ಸ್ಮೃತಿಯ ಮೂಲಕ ಲಾಭ ತೆಗೆದುಕೊಳ್ಳುವಂತಹ ಸದಾ ತಂದೆಯಿಂದ ಆರ್ಶೀವಾದಕ್ಕೆ ಪಾತ್ರ ಭವ

ಏನೆಲ್ಲಾ ಭರವಸೆಗಳನ್ನು ಮನಸ್ಸಿನಿಂದ, ಮಾತಿನಿಂದ ಅಥವಾ ಬರೆದು ಮಾಡುವಿರಿ, ಅವುಗಳನ್ನು ಸ್ಮೃತಿಯಲ್ಲಿಟ್ಟುಕೊಳ್ಳಿ ಆಗ ಭರವಸೆಗಳ ಪೂರ್ತಿ ಲಾಭ ತೆಗೆದುಕೊಳ್ಳಲು ಸಾಧ್ಯ. ಚೆಕ್ ಮಾಡಿಕೊಳ್ಳಿ ಎಷ್ಟು ಬಾರಿ ಭರವಸೆಗಳನ್ನು ಮಾಡಿದಿರಿ ಮತ್ತು ಎಷ್ಟು ನಿಭಾಯಿಸಿರುವಿರಿ! ಭರವಸೆ ಹಾಗೂ ಲಾಭ- ಈ ಎರಡರ ಬ್ಯಾಲೆನ್ಸ್ ಇದ್ದಲ್ಲಿ ವರದಾತಾ ತಂದೆಯ ಮೂಲಕ ಬ್ಲೆಸ್ಸಿಂಗ್ಸ್ ಸಿಗುತ್ತಿರುವುದು. ಹೇಗೆ ಸಂಕಲ್ಪ ಶ್ರೇಷ್ಠ ಮಾಡುವಿರಿ ಅದೇ ರೀತಿ ಕರ್ಮವೂ ಸಹ ಶ್ರೇಷ್ಠವಾಗಿರಲಿ ಆಗ ಸಫಲತಾ ಮೂರ್ತಿಯಾಗಿಬಿಡುವಿರಿ.

ಸ್ಲೋಗನ್:
ಸ್ವಯಂ ಅನ್ನು ಇಂತಹ ದಿವ್ಯ ಕನ್ನಡಿಯನ್ನಾಗಿ ಮಾಡಿಕೊಳ್ಳಿ ಯಾವುದರಲ್ಲಿ ತಂದೆಯೇ ಕಂಡುಬರಬೇಕು ಆಗ ಹೇಳಲಾಗುವುದು ಸತ್ಯ ಸೇವೆ.