12/03/20 ಪ್ರಾತಃಮುರುಳಿ ಓಂಶಾಂತಿ ಬಾಪ್ದಾದಾ ಮಧುಬನ


"ಮಧುರ ಮಕ್ಕಳೇ - ನೀವು ತಂದೆಯ ಕೈಯನ್ನು ಹಿಡಿದಿದ್ದೀರಿ, ನೀವು ಗೃಹಸ್ಥ ವ್ಯವಹಾರದಲ್ಲಿರುತ್ತಲೂ ತಂದೆಯನ್ನು ನೆನಪು ಮಾಡುತ್ತಾ-ಮಾಡುತ್ತಾ ತಮೋಪ್ರಧಾನರಿಂದ ಸತೋಪ್ರಧಾನರಾಗಿ ಬಿಡುತ್ತೀರಿ”

ಪ್ರಶ್ನೆ:

ನೀವು ಮಕ್ಕಳ ಆಂತರ್ಯದಲ್ಲಿ ಯಾವ ಉಲ್ಲಾಸವಿರಬೇಕಾಗಿದೆ? ಸಿಂಹಾಸನಾಧೀಶರಾಗುವ ವಿಧಿಯೇನಾಗಿದೆ?

ಉತ್ತರ:

ಸದಾ ಉಲ್ಲಾಸವಿರಲಿ - ಜ್ಞಾನಸಾಗರ ತಂದೆಯು ನಮಗೆ ಪ್ರತಿ ನಿತ್ಯ ಜ್ಞಾನರತ್ನಗಳ ತಟ್ಟೆಯನ್ನು ತುಂಬಿ-ತುಂಬಿ ಕೊಡುತ್ತಿದ್ದಾರೆ. ಎಷ್ಟು ಯೋಗದಲ್ಲಿರುತ್ತೀರಿ ಅಷ್ಟು ಬುದ್ಧಿಯು ಕಂಚನವಾಗುತ್ತಾ ಹೋಗುವುದು. ಈ ಅವಿನಾಶಿ ಜ್ಞಾನರತ್ನಗಳೇ ಜೊತೆಯಲ್ಲಿ ಹೋಗುತ್ತದೆ. ಸಿಂಹಾಸನಾಧೀಶರಾಗಬೇಕೆಂದರೆ ತಂದೆ-ತಾಯಿಯನ್ನು ಸಂಪೂರ್ಣ ಅನುಸರಣೆ ಮಾಡಿ. ಅವರ ಶ್ರೀಮತದಂತೆ ನಡೆಯಿರಿ, ಅನ್ಯರನ್ನೂ ತಮ್ಮ ಸಮಾನ ಮಾಡಬೇಕಾಗಿದೆ.

ಓಂ ಶಾಂತಿ. ಆತ್ಮೀಯ ಮಕ್ಕಳು ಈ ಸಮಯದಲ್ಲಿ ಎಲ್ಲಿ ಕುಳಿತಿದ್ದೀರಿ? ನಾವು ಆತ್ಮಿಕ ತಂದೆಯ ವಿಶ್ವ ವಿದ್ಯಾಲಯ ಅಥವಾ ಪಾಠಶಾಲೆಯಲ್ಲಿ ಕುಳಿತಿದ್ದೇವೆಂದು ಹೇಳುತ್ತಾರೆ. ನಾವು ಆತ್ಮೀಯ ತಂದೆಯ ಸನ್ಮುಖದಲ್ಲಿ ಕುಳಿತಿದ್ದೇವೆ, ಆ ತಂದೆಯು ನಮಗೆ ಸೃಷ್ಟಿಯ ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ತಿಳಿಸಿಕೊಡುತ್ತಾರೆ ಅಥವಾ ಭಾರತದ ಉತ್ಥಾನ ಹಾಗೂ ಪಥನವು ಹೇಗಾಗುತ್ತದೆ ಎಂದು ತಿಳಿಸುತ್ತಾರೆಂಬುದು ಬುದ್ಧಿಯಲ್ಲಿದೆ. ಯಾವ ಭಾರತವು ಪಾವನವಾಗಿತ್ತು ಅದು ಈಗ ಪತಿತವಾಗಿದೆ. ಭಾರತವು ಕಿರೀಟಧಾರಿಯಾಗಿತ್ತು, ಅಂದಮೇಲೆ ಮತ್ತೆ ಅದರ ಮೇಲೆ ಜಯ ಗಳಿಸಿದವರು ಯಾರು? ರಾವಣ. ರಾಜ್ಯವನ್ನು ಕಳೆದುಕೊಂಡರೆ ಅವನತಿ ಎಂದಾಯಿತಲ್ಲವೆ. ಈಗಂತೂ ಯಾರೂ ರಾಜರಿಲ್ಲ, ಒಂದುವೇಳೆ ಇದ್ದರೂ ಸಹ ಪತಿತರೇ ಆಗಿರುವರು. ಇದೇ ಭಾರತದಲ್ಲಿ ಸೂರ್ಯವಂಶಿ ಮಹಾರಾಜ, ಮಹಾರಾಣಿಯರಿದ್ದರು. ಸೂರ್ಯವಂಶಿ ಮಹಾರಾಜರು ಮತ್ತು ಚಂದ್ರವಂಶಿ ರಾಜರಿದ್ದರು, ಈ ಮಾತುಗಳು ಈಗ ನಿಮ್ಮ ಬುದ್ದಿಯಲ್ಲಿದೆ. ಪ್ರಪಂಚದಲ್ಲಿ ಯಾರೂ ಸಹ ಈ ಮಾತುಗಳನ್ನು ಅರಿತುಕೊಂಡಿಲ್ಲ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ನಮಗೆ ನಮ್ಮ ಆತ್ಮಿಕ ತಂದೆಯೇ ಓದಿಸುತ್ತಿದ್ದಾರೆ, ನಾವು ಆತ್ಮೀಯ ತಂದೆಯ ಕೈಯನ್ನು ಹಿಡಿದಿದ್ದೇವೆ. ಭಲೆ ನಾವು ಗೃಹಸ್ಥ ವ್ಯವಹಾರದಲ್ಲಿಯೇ ಇದ್ದೇವೆ ಆದರೆ ನಾವೀಗ ಸಂಗಮಯುಗದಲ್ಲಿ ನಿಂತಿದ್ದೇವೆ ಎಂದು ಬುದ್ಧಿಯಲ್ಲಿದೆ. ಪತಿತ ಪ್ರಪಂಚದಿಂದ ನಾವು ಪಾವನ ಪ್ರಪಂಚದಲ್ಲಿ ಹೋಗುತ್ತೇವೆ. ಕಲಿಯುಗವು ಪತಿತ ಯುಗವಾಗಿದೆ, ಸತ್ಯಯುಗವು ಪಾವನ ಯುಗವಾಗಿದೆ. ಪತಿತ ಮನುಷ್ಯರು ಪಾವನ ಮನುಷ್ಯರ ಮುಂದೆ ಹೋಗಿ ನಮಸ್ಕರಿಸುತ್ತಾರೆ. ಭಲೆ ಅವರೂ ಭಾರತದ ಮನುಷ್ಯರೇ ಆದರೆ ಅವರು ದೈವೀಗುಣವಂತರಾಗಿದ್ದಾರೆ. ಈಗ ನಾವೂ ಸಹ ತಂದೆಯ ಮೂಲಕ ಇಂತಹ ದೈವೀಗುಣಗಳನ್ನು ಧಾರಣೆ ಮಾಡುತ್ತಿದ್ದೇವೆಂದು ಈಗ ನೀವು ಮಕ್ಕಳಿಗೆ ತಿಳಿದಿದೆ. ಸತ್ಯಯುಗದಲ್ಲಿ ಈ ಪುರುಷಾರ್ಥವನ್ನು ಮಾಡುವುದಿಲ್ಲ. ಅಲ್ಲಿ ಪ್ರಾಲಬ್ಧವಿರುತ್ತದೆ. ಇಲ್ಲಿಯೇ ಪುರುಷಾರ್ಥ ಮಾಡಿ ದೈವೀಗುಣಗಳನ್ನು ಧಾರಣೆ ಮಾಡಿಕೊಳ್ಳಬೇಕಾಗಿದೆ. ನಾವು ತಂದೆಯನ್ನು ನೆನಪು ಮಾಡಿ ಎಷ್ಟು ತಮೋಪ್ರಧಾನರಿಂದ ಸತೋಪ್ರಧಾನರಾಗುತ್ತಿದ್ದೇವೆಂದು ಸದಾ ತಮ್ಮ ಪರಿಶೀಲನೆ ಮಾಡಿಕೊಳ್ಳುತ್ತಿರಬೇಕಾಗಿದೆ. ಎಷ್ಟು ತಂದೆಯನ್ನು ನೆನಪು ಮಾಡುವಿರೋ ಅಷ್ಟು ಸತೋಪ್ರಧಾನರಾಗುವಿರಿ. ತಂದೆಯಂತೂ ಸದಾ ಸತೋಪ್ರಧಾನನಾಗಿದ್ದಾರೆ. ಈಗಲೂ ಸಹ ಪತಿತ ಪ್ರಪಂಚ, ಪತಿತ ಭಾರತವಾಗಿದೆ. ಪಾವನ ಪ್ರಪಂಚದಲ್ಲಿ ಪಾವನ ಭಾರತವಾಗಿತ್ತು. ನಿಮ್ಮ ಬಳಿ ಪ್ರದರ್ಶನಿ ಮೊದಲಾದುವುಗಳಲ್ಲಿ ಭಿನ್ನ-ಭಿನ್ನ ಪ್ರಕಾರದ ಮನುಷ್ಯರು ಬರುತ್ತಾರೆ. ಅದರಲ್ಲಿ ಹೇಗೆ ಭೋಜನವು ಅತ್ಯವಶ್ಯಕವೋ ಹಾಗೆಯೇ ಈ ವಿಕಾರವೂ ಸಹ ಭೋಜನವಾಗಿದೆ. ಇದಿಲ್ಲದಿದ್ದರೆ ಸತ್ತು ಹೋಗುತ್ತೇವೆ ಎಂದು ಕೆಲವರು ಹೇಳುತ್ತಾರೆ ಆದರೆ ಈ ರೀತಿಯ ಮಾತಂತೂ ಇಲ್ಲ. ಸನ್ಯಾಸಿಗಳು ಪವಿತ್ರರಾಗಿದ್ದಾರೆ, ಅಂದಮೇಲೆ ಅವರು ಸತ್ತುಹೋಗುವರೇ! ಈ ರೀತಿ ಮಾತನಾಡುವವರು ಬಹಳ ಅಜಾಮೀಳರಂತಹ ಪಾಪಿಗಳಾಗಿದ್ದಾರೆ. ಇಂತಿಂತಹ ಮಾತುಗಳನ್ನಾಡುತ್ತಾರೆಂದು ತಿಳಿಯಲಾಗುತ್ತದೆ. ಅಂತಹವರಿಗೆ ಹೇಳಬೇಕು - ಈ ವಿಕಾರವಿಲ್ಲದೇ ಹೋದರೆ ನೀವು ಸತ್ತುಹೋಗುವಿರೇನು? ಇದನ್ನು ಭೋಜನದೊಂದಿಗೆ ಹೋಲಿಕೆ ಮಾಡುತ್ತೀರಿ! ಸ್ವರ್ಗದಲ್ಲಿ ಬರುವವರು ಸತೋಪ್ರಧಾನರಾಗಿರುತ್ತಾರೆ ನಂತರ ಕೊನೆಯಲ್ಲಿ ಸತೋ, ರಜೋ, ತಮೋದಲ್ಲಿ ಬರುತ್ತಾರಲ್ಲವೆ. ಯಾರು ಕೊನೆಯಲ್ಲಿ ಬರುವರೋ ಆ ಆತ್ಮಗಳು ನಿರ್ವಿಕಾರಿ ಪ್ರಪಂಚವನ್ನು ನೋಡಿರುವುದೇ ಇಲ್ಲ. ಅಂತಹ ಆತ್ಮಗಳೇ ನಾವು ವಿಕಾರವಿಲ್ಲದೇ ಇರಲು ಸಾಧ್ಯವಾಗುವುದಿಲ್ಲವೆಂದು ಹೇಳುತ್ತಾರೆ. ಆದರೆ ಸೂರ್ಯವಂಶಿಯರಿಗೆ ಇದು ಸತ್ಯವಾದ ಮಾತೆಂದು ಬಹುಬೇಗನೆ ಬುದ್ಧಿಯಲ್ಲಿ ಬಂದು ಬಿಡುತ್ತದೆ. ಅವಶ್ಯವಾಗಿ ಸ್ವರ್ಗದಲ್ಲಿ ವಿಕಾರದ ಹೆಸರು, ಗುರುತೂ ಇರಲಿಲ್ಲ. ಭಿನ್ನ-ಭಿನ್ನ ಪ್ರಕಾರದ ಮನುಷ್ಯರು ಭಿನ್ನ-ಭಿನ್ನ ಪ್ರಕಾರದ ಮಾತುಗಳನ್ನಾಡುತ್ತಾರೆ. ಯಾರ್ಯಾರು ಹೂಗಳಾಗುತ್ತಾರೆಂಬುದನ್ನು ನೀವು ತಿಳಿದುಕೊಂಡಿದ್ದೀರಿ. ಕೆಲವರಂತೂ ಮುಳ್ಳುಗಳಾಗಿಯೇ ಉಳಿದುಕೊಳ್ಳುತ್ತಾರೆ. ಸ್ವರ್ಗದ ಹೆಸರೇ ಆಗಿದೆ - ಹೂಗಳ ಉದ್ಯಾನವನ. ಇದು ಮುಳ್ಳಿನ ಕಾಡಾಗಿದೆ, ಮುಳ್ಳುಗಳೂ ಸಹ ಅನೇಕ ಪ್ರಕಾರದ್ದಾಗಿರುತ್ತದೆಯಲ್ಲವೆ. ಈಗ ನಾವು ಹೂಗಳಾಗುತ್ತಿದ್ದೇವೆಂದು ನಿಮಗೆ ತಿಳಿದಿದೆ. ಅವಶ್ಯವಾಗಿ ಈ ಲಕ್ಷ್ಮಿ-ನಾರಾಯಣರು ಸದಾ ಗುಲಾಬಿ ಹೂಗಳಾಗಿದ್ದಾರೆ, ಇವರಿಗೆ ಹೂಗಳ ರಾಜನೆಂದು ಹೇಳಲಾಗುತ್ತದೆ. ದೈವೀ ಹೂಗಳ ರಾಜ್ಯವಾಗಿದೆಯಲ್ಲವೆ. ಅವಶ್ಯವಾಗಿ ಅವರೂ ಸಹ ಪುರುಷಾರ್ಥವನ್ನು ಮಾಡಿರುವರು. ವಿದ್ಯಾಭ್ಯಾಸದಿಂದಲೇ ಪದವಿಯನ್ನು ಪಡೆದಿದ್ದಾರಲ್ಲವೆ!

ನೀವು ತಿಳಿದುಕೊಂಡಿದ್ದೀರಿ - ನಾವೀಗ ಈಶ್ವರೀಯ ಪರಿವಾರದವರಾಗಿದ್ದೇವೆ, ಮೊದಲಿಗೆ ಈಶ್ವರನನ್ನು ತಿಳಿದುಕೊಂಡಿರಲೇ ಇಲ್ಲ. ತಂದೆಯೇ ಬಂದು ಈ ಪರಿವಾರವನ್ನು ಮಾಡಿದ್ದಾರೆ. ತಂದೆಯು ಮೊದಲು ಸ್ತ್ರೀಯನ್ನು ದತ್ತು ಮಾಡಿಕೊಳ್ಳುತ್ತಾರೆ ನಂತರ ಅವರ ಮೂಲಕ ಮಕ್ಕಳನ್ನು ರಚಿಸುತ್ತಾರೆ. ಈ ತಂದೆಯೂ ಸಹ ಮೊದಲು ಇವರನ್ನು (ಬ್ರಹ್ಮಾ) ದತ್ತು ಮಾಡಿಕೊಂಡರು. ನೀವೆಲ್ಲರೂ ಬ್ರಹ್ಮಾಕುಮಾರ-ಕುಮಾರಿಯರಾಗಿದ್ದೀರಲ್ಲವೆ. ಈ ಸಂಬಂಧವು ಪ್ರವೃತ್ತಿ ಮಾರ್ಗದ್ದಾಗಿ ಬಿಡುತ್ತದೆ. ಸನ್ಯಾಸಿಗಳದಂತೂ ನಿವೃತ್ತಿ ಮಾರ್ಗವಾಗಿದೆ, ಅವರಲ್ಲಿ ಯಾರೂ ತಂದೆ-ತಾಯಿಯೆಂದು ಕರೆಯುವುದಿಲ್ಲ. ಇಲ್ಲಿ ನೀವು ನಮ್ಮ ಬಾಬಾ ಎಂದು ಹೇಳುತ್ತೀರಿ. ಮತ್ತ್ಯಾವುದೆಲ್ಲಾ ಸತ್ಸಂಗಗಳಿವೆಯೋ ಅವೆಲ್ಲವೂ ನಿವೃತ್ತಿ ಮಾರ್ಗದ್ದಾಗಿದೆ. ಇವರೊಬ್ಬರೇ ತಂದೆಯಾಗಿದ್ದಾರೆ, ಯಾರನ್ನು ಮಾತಾಪಿತನೆಂದು ಕರೆಯುತ್ತಾರೆ. ತಂದೆಯೇ ಕುಳಿತು ತಿಳಿಸಿಕೊಡುತ್ತಾರೆ, ಭಾರತದಲ್ಲಿ ಪವಿತ್ರ ಪ್ರವೃತ್ತಿ ಮಾರ್ಗವಿತ್ತು, ಈಗ ಅಪವಿತ್ರವಾಗಿ ಬಿಟ್ಟಿದೆ. ನಾನು ಪುನಃ ಅದೇ ಪ್ರವೃತ್ತಿ ಮಾರ್ಗವನ್ನು ಸ್ಥಾಪನೆ ಮಾಡುತ್ತೇನೆ. ನಿಮಗೆ ತಿಳಿದಿದೆ, ನಮ್ಮ ಧರ್ಮವು ಬಹಳ ಸುಖ ಕೊಡುವಂತಹದ್ದಾಗಿದೆ ಅಂದಮೇಲೆ ನಾವು ಮತ್ತೆ ಹಳೆಯ ಧರ್ಮದವರ ಸಂಗವನ್ನು ಮಾಡುವುದಾದರೂ ಏಕೆ! ನೀವು ಸ್ವರ್ಗದಲ್ಲಿ ಎಷ್ಟೊಂದು ಸುಖಿಯಾಗಿರುತ್ತೀರಿ. ವಜ್ರ ವೈಡೂರ್ಯಗಳ ಮಹಲುಗಳಿರುತ್ತವೆ. ಇಲ್ಲಿ ಭಲೆ ಅಮೇರಿಕಾ, ರಷ್ಯಾ ಮುಂತಾದ ದೇಶಗಳಲ್ಲಿ ಬಹಳಷ್ಟು ಸಾಹುಕಾರರಿದ್ದಾರೆ ಆದರೆ ಇಲ್ಲಿ ಸ್ವರ್ಗದಂತಹ ಸುಖವಿರಲು ಸಾಧ್ಯವಿಲ್ಲ. ಚಿನ್ನದ ಇಟ್ಟಿಗೆಗಳಂತಹ ಮಹಲುಗಳನ್ನು ಇಲ್ಲಿ ಯಾರೂ ಕಟ್ಟಿಸಲು ಸಾಧ್ಯವಿಲ್ಲ. ಚಿನ್ನದ ಮಹಲುಗಳು ಸತ್ಯಯುಗದಲ್ಲಿಯೇ ಇರುತ್ತದೆ. ಇಲ್ಲಿ ಚಿನ್ನವಾದರೂ ಎಲ್ಲಿದೆ! ಅಲ್ಲಂತೂ ಎಲ್ಲಿ ನೋಡಿದರಲ್ಲಿ ವಜ್ರ ವೈಡೂರ್ಯಗಳೇ ಇರುತ್ತವೆ. ಇಲ್ಲಿ ವಜ್ರಗಳ ಬೆಲೆ ಎಷ್ಟೊಂದು ಏರಿಬಿಟ್ಟಿದೆ. ಇದೆಲ್ಲವೂ ಮಣ್ಣು ಪಾಲಾಗಲಿದೆ. ತಂದೆಯು ತಿಳಿಸುತ್ತಾರೆ – ಹೊಸ ಪ್ರಪಂಚದಲ್ಲಿ ಎಲ್ಲವೂ ಹೊಸ ಗಣಿಗಳು ತುಂಬಲ್ಪಟ್ಟಿರುತ್ತವೆ. ಈಗ ಇದೆಲ್ಲವೂ ಖಾಲಿಯಾಗುತ್ತಾ ಇರುವುದು. ಸಾಗರನು ವಜ್ರ ರತ್ನಗಳಿಂದ ತುಂಬಿದ ತಟ್ಟೆಗಳನ್ನು ಕೊಟ್ಟನೆಂದು ತೋರಿಸುತ್ತಾರೆ. ಸತ್ಯಯುಗದಲ್ಲಿ ನಿಮಗೆ ಯಥೇಚ್ಛವಾಗಿ ವಜ್ರ ರತ್ನಗಳು ಸಿಗುತ್ತವೆ. ಸಾಗರವನ್ನೂ ಸಹ ದೇವತಾ ರೂಪವೆಂದು ತಿಳಿಯುತ್ತಾರೆ. ನೀವು ತಿಳಿದುಕೊಂಡಿದ್ದೀರಿ - ತಂದೆಯು ಜ್ಞಾನಸಾಗರನಾಗಿದ್ದಾರೆ, ಅಂದಮೇಲೆ ಸದಾ ಉಲ್ಲಾಸವಿರಲಿ - ಜ್ಞಾನಸಾಗರ ತಂದೆಯು ನಮಗೆ ಪ್ರತಿನಿತ್ಯವೂ ಜ್ಞಾನರತ್ನಗಳ ವಜ್ರಗಳ ತಟ್ಟೆಗಳನ್ನು ತುಂಬಿಕೊಡುತ್ತಾರೆ. ಉಳಿದಂತೆ ಅವೆಲ್ಲವೂ ನೀರಿನ ಸಾಗರಗಳಾಗಿವೆ, ತಂದೆಯು ನೀವು ಮಕ್ಕಳಿಗೇ ಜ್ಞಾನರತ್ನಗಳನ್ನು ಕೊಡುತ್ತಾರೆ, ಅವನ್ನು ನೀವು ತುಂಬಿಸಿಕೊಳ್ಳುತ್ತೀರಿ. ಎಷ್ಟು ಲೋಭದಲ್ಲಿರುತ್ತೀರೋ ಅಷ್ಟು ವಿಚಾರಗಳು ಬರುತ್ತವೆ, ಎಷ್ಟು ಯೋಗದಲ್ಲಿರುತ್ತೀರೋ ಅಷ್ಟು ಬುದ್ಧಿಯು ಕಂಚನವಾಗುತ್ತಾ ಹೋಗುತ್ತದೆ. ಈ ಅವಿನಾಶಿ ಜ್ಞಾನರತ್ನಗಳನ್ನೇ ನೀವು ಜೊತೆ ತೆಗೆದುಕೊಂಡು ಹೋಗುತ್ತೀರಿ. ತಂದೆಯ ನೆನಪು ಮತ್ತು ಈ ಜ್ಞಾನವೇ ಮುಖ್ಯವಾಗಿದೆ.

ನೀವು ಮಕ್ಕಳಿಗೆ ಆಂತರ್ಯದಲ್ಲಿ ಬಹಳ ಉಲ್ಲಾಸವಿರಬೇಕು. ತಂದೆಯೂ ಗುಪ್ತವಾಗಿದ್ದಾರೆ, ನೀವೂ ಸಹ ಗುಪ್ತ ಸೈನಿಕರಾಗಿದ್ದೀರಿ. ಅಹಿಂಸಕರು, ಗುಪ್ತ ಸೈನಿಕರೆಂದು ಹೇಳುತ್ತಾರಲ್ಲವೆ. ಇಂತಹವರು ಬಹಳ ಶಕ್ತಿಶಾಲಿ ಯೋಧರೆಂದು ಹೇಳುತ್ತಾರೆ ಆದರೆ ಅವರ ಹೆಸರು, ಗುರುತು ಏನೂ ತಿಳಿದಿಲ್ಲ. ಈ ರೀತಿಯಂತೂ ಆಗಲು ಸಾಧ್ಯವಿಲ್ಲ. ಸರ್ಕಾರದ ಬಳಿ ಪ್ರತಿಯೊಬ್ಬರ ಪೂರ್ಣ ಪರಿಚಯವಿರುತ್ತದೆ. ಅಹಿಂಸಕರು, ಗುಪ್ತ ಸೈನಿಕರೆಂಬುದು ನಿಮ್ಮ ಹೆಸರಾಗಿದೆ. ಎಲ್ಲದಕ್ಕಿಂತ ಮೊಟ್ಟ ಮೊದಲ ಹಿಂಸೆಯು ಈ ವಿಕಾರವಾಗಿದೆ. ಇದೇ ಆದಿ-ಮಧ್ಯ-ಅಂತ್ಯ ದುಃಖವನ್ನು ಕೊಡುತ್ತದೆ ಆದ್ದರಿಂದ ಹೇ ಪತಿತ-ಪಾವನ, ನಾವು ಪತಿತರನ್ನು ಬಂದು ಪಾವನ ಮಾಡು ಎಂದು ಕರೆಯುತ್ತಾರೆ. ಪಾವನ ಪ್ರಪಂಚದಲ್ಲಿ ಒಬ್ಬರೂ ಪತಿತರಿರಲು ಸಾಧ್ಯವಿಲ್ಲ. ಇದನ್ನು ನೀವು ಮಕ್ಕಳು ತಿಳಿದುಕೊಂಡಿದ್ದೀರಿ, ಈಗಲೇ ನಾವು ಭಗವಂತನಿಂದ ಆಸ್ತಿಯನ್ನು ಪಡೆಯಲು ಅವರ ಮಕ್ಕಳಾಗಿದ್ದೇವೆ. ಆದರೆ ಮಾಯೆಯೂ ಸಹ ಕಡಿಮೆಯೇನಿಲ್ಲ. ಮಾಯೆಯ ಒಂದೇ ಏಟು ಒಮ್ಮೆಲೆ ಕೆಳಗೆ ಬೀಳಿಸಿ ಬಿಡುತ್ತದೆ. ಯಾರು ವಿಕಾರದಲ್ಲಿ ಬೀಳುವರೋ ಅವರ ಬುದ್ಧಿಯು ಭ್ರಷ್ಟವಾಗಿ ಬಿಡುತ್ತದೆ. ಪರಸ್ಪರ ದೇಹಧಾರಿಗಳೊಂದಿಗೆ ಎಂದೂ ಪ್ರೀತಿಯನ್ನಿಡಬೇಡಿ, ಒಬ್ಬ ತಂದೆಯೊಂದಿಗೇ ಪ್ರೀತಿಯಿಡಿ ಎಂದು ತಂದೆಯು ತಿಳಿಸುತ್ತಾರೆ. ಯಾವುದೇ ದೇಹಧಾರಿಯೊಂದಿಗೆ ಪ್ರೀತಿಯನ್ನಿಟ್ಟುಕೊಳ್ಳಬಾರದು. ಯಾರು ದೇಹ ರಹಿತ ವಿಚಿತ್ರ ತಂದೆಯಿದ್ದಾರೆಯೋ ಅವರೊಂದಿಗೇ ಪ್ರೀತಿಯನ್ನಿಡಿ. ತಂದೆಯು ಎಷ್ಟೊಂದು ತಿಳಿಸುತ್ತಿರುತ್ತಾರೆ ಆದರೂ ಸಹ ತಿಳಿದುಕೊಳ್ಳುವುದೇ ಇಲ್ಲ. ಅದೃಷ್ಟದಲ್ಲಿಲ್ಲವೆಂದರೆ ಒಬ್ಬರು ಇನ್ನೊಬ್ಬರ ದೇಹದ ಆಕರ್ಷಣೆಯಲ್ಲಿ ಸಿಕ್ಕಿಕೊಳ್ಳುತ್ತಾರೆ. ತಂದೆಯು ಎಷ್ಟೊಂದು ತಿಳಿಸುತ್ತಾರೆ - ನೀವೂ ಸಹ ರೂಪವಾಗಿದ್ದೀರಿ. ಆತ್ಮ ಮತ್ತು ಪರಮಾತ್ಮನ ರೂಪವು ಒಂದೇ ಆಗಿದೆ. ಆತ್ಮನ ಗಾತ್ರವು ಚಿಕ್ಕದು-ದೊಡ್ಡದಿರುವುದಿಲ್ಲ. ಆತ್ಮವು ಅವಿನಾಶಿಯಾಗಿದೆ, ಪ್ರತಿಯೊಬ್ಬರ ಪಾತ್ರವು ಡ್ರಾಮಾದಲ್ಲಿ ನಿಗಧಿಯಾಗಿದೆ. ಈಗ ಎಷ್ಟೊಂದು ಜನಸಂಖ್ಯೆಯಿದೆ ಆದರೆ ಸತ್ಯಯುಗದಲ್ಲಿ ಕೇವಲ 9-10 ಲಕ್ಷ ಮಾತ್ರವೇ ಜನಸಂಖ್ಯೆಯಿರುತ್ತದೆ. ಸತ್ಯಯುಗದ ಆದಿಯಲ್ಲಿ ವೃಕ್ಷವು ಎಷ್ಟು ಚಿಕ್ಕದಾಗಿರುತ್ತದೆ, ಎಂದಿಗೂ ಪ್ರಳಯವಾಗುವುದಿಲ್ಲ. ನಿಮಗೆ ತಿಳಿದಿದೆ, ಯಾರೆಲ್ಲಾ ಮನುಷ್ಯ ಮಾತ್ರರಿದ್ದಾರೆಯೋ ಅವರಲ್ಲಿನ ಆತ್ಮಗಳೆಲ್ಲರೂ ಮೂಲವತನದಲ್ಲಿರುತ್ತಾರೆ. ಅವರದೂ ವೃಕ್ಷವಿದೆ (ನಿರಾಕಾರಿ ವೃಕ್ಷ) ಬೀಜವನ್ನು ಹಾಕುವುದರಿಂದ ಅದರಿಂದ ಇಡೀ ವೃಕ್ಷವು ಬೆಳೆಯುತ್ತದೆಯಲ್ಲವೆ. ಮೊಟ್ಟ ಮೊದಲಿಗೆ ಎರಡು ಎಲೆಗಳು ಹೊರಡುತ್ತವೆ ಹಾಗೆಯೇ ಇದೂ ಸಹ ಬೇಹದ್ದಿನ ವೃಕ್ಷವಾಗಿದೆ. ಗೋಲದ ಚಿತ್ರದ ಬಗ್ಗೆ ತಿಳಿಸುವುದು ಬಹಳ ಸಹಜವಾಗಿದೆ, ವಿಚಾರ ಮಾಡಿ. ಈಗ ಕಲಿಯುಗವಾಗಿದೆ, ಸತ್ಯಯುಗದಲ್ಲಿ ಒಂದೇ ಧರ್ಮವಿತ್ತು ಆಗ ಕೆಲವರೇ ಮನುಷ್ಯರಿರುತ್ತಾರೆ, ಈಗ ಎಷ್ಟೊಂದು ಮನುಷ್ಯರು ಎಷ್ಟೊಂದು ಧರ್ಮಗಳಿವೆ. ಇಷ್ಟೊಂದು ಮಂದಿ ಯಾರು ಮೊದಲಿಗೆ ಇರಲಿಲ್ಲವೋ ಅವರು ಮತ್ತೆ ಎಲ್ಲಿಗೆ ಹೋಗುತ್ತಾರೆ? ಎಲ್ಲಾ ಆತ್ಮಗಳು ಪರಮಧಾಮಕ್ಕೆ ಹೊರಟು ಹೋಗುತ್ತಾರೆ. ನಿಮ್ಮ ಬುದ್ಧಿಯಲ್ಲಿ ಸಂಪೂರ್ಣ ಜ್ಞಾನವಿದೆ. ಹೇಗೆ ತಂದೆಯು ಜ್ಞಾನಸಾಗರನಾಗಿದ್ದಾರೆಯೋ ಹಾಗೆಯೇ ನಿಮ್ಮನ್ನೂ ಮಾಡುತ್ತಾರೆ. ನೀವು ಓದಿ ಈ ಪದವಿಯನ್ನು ಪಡೆಯುತ್ತೀರಿ. ತಂದೆಯು ಸ್ವರ್ಗದ ರಚಯಿತನಾಗಿದ್ದಾರೆ, ಅಂದಮೇಲೆ ಸ್ವರ್ಗದ ಆಸ್ತಿಯನ್ನು ಭಾರತವಾಸಿಗಳಿಗೇ ಕೊಡುತ್ತಾರೆ ಉಳಿದವರನ್ನು ಹಿಂತಿರುಗಿ ಮನೆಗೆ ಕರೆದುಕೊಂಡು ಹೋಗುತ್ತಾರೆ. ತಂದೆಯು ತಿಳಿಸುತ್ತಾರೆ - ನಾನು ನೀವು ಮಕ್ಕಳಿಗೆ ಓದಿಸಲು ಬಂದಿದ್ದೇನೆ. ಎಷ್ಟು ಪುರುಷಾರ್ಥ ಮಾಡುವಿರೋ ಅಷ್ಟು ಪದವಿಯನ್ನು ಪಡೆಯುವಿರಿ, ಎಷ್ಟು ಶ್ರೀಮತದನುಸಾರ ನಡೆಯುತ್ತೀರೋ ಅಷ್ಟು ಶ್ರೇಷ್ಠರಾಗುತ್ತೀರಿ. ಎಲ್ಲವೂ ಪುರುಷಾರ್ಥದ ಮೇಲೆ ಆಧಾರಿತವಾಗಿದೆ. ಮಮ್ಮಾ-ಬಾಬಾರವರ ಸಿಂಹಾಸನಕ್ಕೆ ಅಧಿಕಾರಿಗಳಾಗಬೇಕೆಂದರೆ ಅವರನ್ನು ಸಂಪೂರ್ಣ ಅನುಕರಣೆ ಮಾಡಿ, ಸಿಂಹಾಸನಾಧಿಕಾರಿಗಳಾಗಲು ಅವರ ಚಲನೆಯನುಸಾರ ನಡೆಯಿರಿ, ಅನ್ಯರನ್ನು ತಮ್ಮ ಸಮಾನ ಮಾಡಿಕೊಳ್ಳಿ. ತಂದೆಯು ಅನೇಕ ಪ್ರಕಾರದ ಯುಕ್ತಿಗಳನ್ನು ತಿಳಿಸುತ್ತಾರೆ. ಈ ಬ್ಯಾಡ್ಜ್ನ ಮೇಲೆ ನೀವು ಬಹಳ ಚೆನ್ನಾಗಿ ತಿಳಿಸಿಕೊಡಬಹುದು. ಪುರುಷೋತ್ತಮ ಮಾಸವಿದ್ದಾಗ ಚಿತ್ರಗಳನ್ನು ಉಚಿತವಾಗಿ ಕೊಟ್ಟು ಬಿಡಿ ತಂದೆಯು ತಿಳಿಸುತ್ತಾರೆ. ತಂದೆಯು ಉಡುಗೊರೆ ಕೊಡುತ್ತಾರೆ. ಕೈಯಲ್ಲಿ ಹಣವು ಬಂದಾಗ ತಂದೆಗೂ ಬಹಳಷ್ಟು ಖರ್ಚಾಗುತ್ತದೆ ಎಂಬುದನ್ನು ತಿಳಿದುಕೊಂಡು ಅವಶ್ಯವಾಗಿ ಹಣವನ್ನು ಬಹಳ ಬೇಗನೆ ಕಳುಹಿಸುತ್ತಾರೆ. ಮನೆಯಂತೂ ಒಂದೇ ಆಗಿದೆ, ಈ ಟ್ರಾನ್ಸ್ಲೈಟ್ ಚಿತ್ರಗಳ ಪ್ರದರ್ಶನಿಯನ್ನಿಟ್ಟಾಗ ಅನೇಕರು ನೋಡಲು ಬರುತ್ತಾರೆ. ಇದು ಪುಣ್ಯದ ಕೆಲಸವಾಗಿದೆಯಲ್ಲವೆ. ಮನುಷ್ಯರನ್ನು ಮುಳ್ಳುಗಳಿಂದ ಹೂ, ಪಾಪಾತ್ಮರಿಂದ ಪುಣ್ಯಾತ್ಮರನ್ನಾಗಿ ಮಾಡಿದರೆ ಇದಕ್ಕೆ ವಿಹಂಗಮಾರ್ಗವೆಂದು ಕರೆಯಲಾಗುತ್ತದೆ. ಪ್ರದರ್ಶನಿಯಲ್ಲಿ ಪುಸ್ತಕಗಳನ್ನು ಖರೀದಿಸಲು ಅನೇಕರು ಬರುತ್ತಾರೆ. ಖರ್ಚು ಕಡಿಮೆಯಾಗುತ್ತದೆ. ಇಲ್ಲಿ ನೀವು ತಂದೆಯಿಂದ ಸ್ವರ್ಗದ ರಾಜ್ಯಭಾಗ್ಯವನ್ನು ಖರೀದಿ ಮಾಡಲು ಬರುತ್ತೀರಿ ಅಂದಾಗ ಪ್ರದರ್ಶನಿಯಲ್ಲಿಯೂ ಸಹ ಸ್ವರ್ಗದ ರಾಜ್ಯವನ್ನು ಖರೀದಿಸಲು ಬರುತ್ತಾರೆ. ಇದು ಅಂಗಡಿಯಾಗಿದೆಯಲ್ಲವೆ.

ತಂದೆಯು ತಿಳಿಸುತ್ತಾರೆ - ಈ ಜ್ಞಾನದಿಂದ ನಿಮಗೆ ಬಹಳ ಸುಖ ಸಿಗುವುದು. ಆದ್ದರಿಂದ ಒಳ್ಳೆಯ ರೀತಿಯಲ್ಲಿ ಓದಿ ಪುರುಷಾರ್ಥ ಮಾಡಿ ಪೂರ್ಣ ತೇರ್ಗಡೆಯಾಗಬೇಕು. ತಂದೆಯೇ ಕುಳಿತು ತನ್ನ ಮತ್ತು ರಚನೆಯ ಆದಿ-ಮಧ್ಯ-ಅಂತ್ಯದ ಪರಿಚಯವನ್ನು ಕೊಡುತ್ತಾರೆ, ಮತ್ತ್ಯಾರೂ ಕೊಡಲು ಸಾಧ್ಯವಿಲ್ಲ. ಈಗ ತಂದೆಯ ಮೂಲಕ ನೀವು ತ್ರಿಕಾಲದರ್ಶಿಗಳಾಗುತ್ತೀರಿ. ತಂದೆಯು ತಿಳಿಸುತ್ತಾರೆ - ನಾನು ಹೇಗಿದ್ದೇನೆ, ಯಾರಾಗಿದ್ದೇನೆಯೋ ಹಾಗೆಯೇ ನನ್ನನ್ನು ಯಥಾರ್ಥವಾಗಿ ಯಾರೂ ಅರಿತುಕೊಂಡಿಲ್ಲ. ನಿಮ್ಮಲ್ಲಿಯೂ ನಂಬರ್ವಾರ್ ಇದ್ದಾರೆ. ಒಂದುವೇಳೆ ಯಥಾರ್ಥವಾಗಿ ಅರಿತುಕೊಂಡಿದ್ದೇ ಆದರೆ ಎಂದೂ ಕೈ ಬಿಡುವುದಿಲ್ಲ. ಇದು ವಿದ್ಯೆಯಾಗಿದೆ, ಭಗವಂತನೇ ಕುಳಿತು ಓದಿಸುತ್ತಾರೆ. ತಂದೆಯು ತಿಳಿಸುತ್ತಾರೆ - ನಾನು ನಿಮ್ಮ ವಿಧೇಯ ಸೇವಕನಾಗಿದ್ದೇನೆ, ತಂದೆ ಮತ್ತು ಶಿಕ್ಷಕ ಇಬ್ಬರೂ ವಿಧೇಯ ಸೇವಕರಾಗಿರುತ್ತಾರೆ. ನಾಟಕದಲ್ಲಿ ನನ್ನ ಪಾತ್ರವೇ ಹೀಗಿದೆ, ಮತ್ತೆ ನಿಮ್ಮೆಲ್ಲರನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗುವೆನು. ಶ್ರೀಮತದಂತೆ ನಡೆದು ಗೌರವಪೂರ್ಣವಾಗಿ ತೇರ್ಗಡೆಯಾಗಬೇಕು. ವಿದ್ಯೆಯು ಬಹಳ ಸಹಜವಾಗಿದೆ. ಎಲ್ಲರಿಗಿಂತ ಈ ವೃದ್ಧರು ಓದಿಸುವವರಾಗಿದ್ದಾರೆ. ಶಿವ ತಂದೆಯು ತಿಳಿಸುತ್ತಾರೆ - ನಾನು ವೃದ್ಧನಲ್ಲ, ಆತ್ಮವೆಂದೂ ವೃದ್ಧನಾಗುವುದಿಲ್ಲ ಆದರೆ ಕಲ್ಲು ಬುದ್ಧಿಯಾಗುತ್ತದೆ. ನಾನಂತೂ ಪಾರಸ ಬುದ್ಧಿಯವನಾಗಿದ್ದೇನೆ, ಆದ್ದರಿಂದಲೇ ನಿಮ್ಮನ್ನು ಪಾರಸ ಬುದ್ಧಿಯವರನ್ನಾಗಿ ಮಾಡಲು ಬರುತ್ತೇನೆ, ಕಲ್ಪ-ಕಲ್ಪವೂ ಬರುತ್ತೇನೆ, ಲೆಕ್ಕವಿಲ್ಲದಷ್ಟು ಬಾರಿ ಓದಿಸುತ್ತೇನೆ ಆದರೂ ಸಹ ನೀವು ಮರೆತು ಹೋಗುತ್ತೀರಿ. ಸತ್ಯಯುಗದಲ್ಲಿ ಈ ಜ್ಞಾನದ ಅವಶ್ಯಕತೆಯೇ ಇರುವುದಿಲ್ಲ. ತಂದೆಯು ಎಷ್ಟು ಚೆನ್ನಾಗಿ ತಿಳಿಸಿಕೊಡುತ್ತಾರೆ! ಆದರೆ ಇಂತಹ ತಂದೆಗೂ ವಿಚ್ಛೇದನ ಕೊಟ್ಟು ಬಿಡುತ್ತಾರೆ. ಆದ್ದರಿಂದ ಹೇಳಲಾಗುತ್ತದೆ - ಮಹಾನ್ ಮೂರ್ಖರನ್ನು ನೋಡಬೇಕೆಂದರೆ ಇಲ್ಲಿ ನೋಡಿ, ಯಾವ ತಂದೆಯಿಂದ ಸ್ವರ್ಗದ ಆಸ್ತಿಯು ಸಿಗುತ್ತದೆಯೋ ಅವರನ್ನೂ ಸಹ ಬಿಟ್ಟು ಬಿಡುತ್ತಾರೆ. ತಂದೆಯು ತಿಳಿಸುತ್ತಾರೆ - ನೀವು ನನ್ನ ಮತದಂತೆ ನಡೆದಿದ್ದೇ ಆದರೆ ಅಮರಲೋಕದಲ್ಲಿ ವಿಶ್ವದ ಮಹಾರಾಜ-ಮಹಾರಾಣಿಯರಾಗುತ್ತೀರಿ. ಇದು ಮೃತ್ಯುಲೋಕವಾಗಿದೆ. ಮಕ್ಕಳಿಗೆ ತಿಳಿದಿದೆ - ನಾವೇ ಪೂಜ್ಯ ದೇವಿ-ದೇವತೆಗಳಾಗಿದ್ದೆವು. ಈಗ ನಾವು ಏನಾಗಿ ಬಿಟ್ಟಿದ್ದೇವೆ? ಪತಿತ, ಭಿಕಾರಿಗಳು. ಈಗ ಪುನಃ ನಾವೇ ರಾಜಕುಮಾರರಾಗಲಿದ್ದೇವೆ. ಎಲ್ಲರ ಪುರುಷಾರ್ಥವು ಏಕರಸವಾಗಿರಲು ಸಾಧ್ಯವಿಲ್ಲ. ಕೆಲವರು ಕೆಳಗೆ ಬೀಳುತ್ತಾರೆ, ಕೆಲವರು ವಿರೋಧಿಗಳಾಗುತ್ತಾರೆ. ಇಂತಹ ವಿರೋಧಿಗಳೂ ಇದ್ದಾರೆ ಅವರೊಂದಿಗೆ ಮಾತನಾಡಲೂಬಾರದು. ಜ್ಞಾನದ ಮಾತುಗಳ ವಿನಃ ಮತ್ತೇನನ್ನಾದರೂ ಕೇಳಿದರೆ ಅವರು ಶತ್ರುವೆಂದು ತಿಳಿದುಕೊಳ್ಳಿ. ಸತ್ಸಂಗವು ಮೇಲೆತ್ತುವುದು, ಕೆಟ್ಟ ಸಂಗವು ಕೆಳಗೆ ಬೀಳಿಸುವುದು. ಯಾರು ಜ್ಞಾನದಲ್ಲಿ ಬುದ್ಧಿವಂತರಾಗಿ ತಂದೆಯ ಹೃದಯವನ್ನೇರಿರುತ್ತಾರೆಯೋ ಅಂತಹವರ ಸಂಗ ಮಾಡಿ. ಅವರು ನಿಮಗೆ ಜ್ಞಾನದ ಮಧುರಾತಿ ಮಧುರ ಮಾತುಗಳನ್ನು ತಿಳಿಸುತ್ತಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಸೇವಾಧಾರಿ, ಆಜ್ಞಾಕಾರಿ, ಪ್ರಾಮಾಣಿಕ ಮಕ್ಕಳಿಗೆ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:

1. ಯಾರು ದೇಹರಹಿತ ವಿಚಿತ್ರನಾಗಿದ್ದಾರೆಯೋ ಆ ತಂದೆಯೊಂದಿಗೆ ಪ್ರೀತಿಯನ್ನಿಡಬೇಕಾಗಿದೆ. ಯಾವುದೇ ದೇಹಧಾರಿಯ ನಾಮ-ರೂಪದಲ್ಲಿ ಬುದ್ಧಿಯನ್ನು ಸಿಲುಕಿಸಬಾರದು. ಮಾಯೆಯ ಪೆಟ್ಟು ಬೀಳದಂತೆ ಸಂಭಾಲನೆ ಮಾಡಿಕೊಳ್ಳಬೇಕಾಗಿದೆ.

2. ಯಾರು ಜ್ಞಾನದ ಮಾತುಗಳನ್ನು ಬಿಟ್ಟು ಬೇರೇನಾದರೂ ತಿಳಿಸಿದರೆ ಅಂತಹವರ ಸಂಗ ಮಾಡಬಾರದು. ಸಂಪೂರ್ಣ ತೇರ್ಗಡೆಯಾಗುವ ಪುರುಷಾರ್ಥ ಮಾಡಬೇಕಾಗಿದೆ. ಮುಳ್ಳುಗಳನ್ನು ಹೂಗಳನ್ನಾಗಿ ಮಾಡುವ ಸೇವೆ ಮಾಡಬೇಕಾಗಿದೆ.

ವರದಾನ:

ಕಾರಣವನ್ನು ನಿವಾರಣೆ ಮಾಡಿ ಚಿಂತೆ ಮತ್ತು ಭಯದಿಂದ ಮುಕ್ತರಾಗಿರುವಂತಹ ಮಾಸ್ಟರ್ ಸರ್ವಶಕ್ತಿವಾನ್ ಭವ.

ವರ್ತಮಾನ ಸಮಯ ಅಲ್ಪಕಾಲದ ಸುಖದ ಜೊತೆ ಚಿಂತೆ ಮತ್ತು ಭಯವಂತೂ ಇದ್ದೇ ಇದೆ. ಎಲ್ಲಿ ಚಿಂತೆಯಿದೆ ಅಲ್ಲಿ ನೆಮ್ಮದಿ ಇರಲು ಸಾಧ್ಯವಿಲ್ಲ. ಎಲ್ಲಿ ಭಯವಿದೆ ಅಲ್ಲಿ ಶಾಂತಿ ಇರಲು ಸಾಧ್ಯವಿಲ್ಲ. ಆದ್ದರಿಂದ ಸುಖದ ಜೊತೆ ಇಲ್ಲಿ ದುಃಖ ಅಶಾಂತಿಯ ಕಾರಣವೂ ಸಹ ಇದ್ದೇ ಇದೆ. ಆದರೆ ತಾವು ಸರ್ವ ಶಕ್ತಿಗಳ ಖಜಾನೆಯಿಂದ ಸಂಪನ್ನ ಮಾಸ್ಟರ್ ಸರ್ವ ಶಕ್ತಿವಾನ್ ಮಕ್ಕಳು ದುಃಖದ ಕಾರಣವನ್ನು ನಿವಾರಣೆ ಮಾಡುವವರಾಗಿರುವಿರಿ, ಎಲ್ಲಾ ಸಮಸ್ಯೆಯ ಸಮಾಧಾನ ಮಾಡುವಂತಹ ಸಮಾಧಾನ ಸ್ವರೂಪರಾಗಿರುವಿರಿ. ಆದ್ದರಿಂದ ಚಿಂತೆ ಮತ್ತು ಭಯದಿಂದ ಮುಕ್ತರಾಗಿರುವಿರಿ. ಯಾವುದೇ ಸಮಸ್ಯೆ ನಿಮ್ಮ ಮುಂದೆ ಆಟವಾಡಲು ಬರುವುದೇ ವಿನಹ ನಿಮ್ಮನ್ನು ಭಯ ಬೀಳಿಸಲು ಅಲ್ಲ.

ಸ್ಲೋಗನ್:

ತಮ್ಮ ವೃತ್ತಿಯನ್ನು ಶ್ರೇಷ್ಠ ಮಾಡಿಕೊಳ್ಳಿ ಆಗ ತಮ್ಮ ಪ್ರವೃತ್ತಿ ಸ್ವತಃ ಶ್ರೇಷ್ಠವಾಗಿ ಬಿಡುವುದು.