29.08.25 Morning Kannada Murli Om Shanti
BapDada Madhuban
"ಮಧುರ ಮಕ್ಕಳೇ - ತಮ್ಮ
ರಕ್ಷಣೆಗಾಗಿ ವಿಕಾರಗಳೆಂಬ ಮಾಯೆಯ ಮುಷ್ಟಿಯಿಂದ ಸದಾ ದೂರವಿರಬೇಕಾಗಿದೆ, ದೇಹಾಭಿಮಾನದಲ್ಲೆಂದೂ
ಬರಬಾರದು".
ಪ್ರಶ್ನೆ:
ಪುಣ್ಯಾತ್ಮರಾಗಲು
ತಂದೆಯು ಎಲ್ಲಾ ಮಕ್ಕಳಿಗೆ ಯಾವ ಮುಖ್ಯ ಶಿಕ್ಷಣವನ್ನು ಕೊಡುತ್ತಾರೆ?
ಉತ್ತರ:
ತಂದೆಯು
ತಿಳಿಸುತ್ತಾರೆ - ಮಕ್ಕಳೇ, ಪುಣ್ಯಾತ್ಮರಾಗಬೇಕೆಂದರೆ 1. ಸದಾ ಶ್ರೀಮತದಂತೆ ನಡೆಯುತ್ತಾ ಇರಿ,
ನೆನಪಿನ ಯಾತ್ರೆಯಲ್ಲಿ ನಿರ್ಲಕ್ಷ್ಯ ಮಾಡಬೇಡಿ. 2. ಆತ್ಮಾಭಿಮಾನಿಗಳಾಗುವ ಸಂಪೂರ್ಣ ಪುರುಷಾರ್ಥ
ಮಾಡಿ. ಕಾಮ ಮಹಾಶತ್ರುವಿನ ಮೇಲೆ ಜಯ ಪ್ರಾಪ್ತಿ ಮಾಡಿಕೊಳ್ಳಿ. ಪುಣ್ಯಾತ್ಮನಾಗಿ ಈ ದುಃಖಧಾಮದಿಂದ
ದೂರ ಸುಖಧಾಮದಲ್ಲಿ ಹೋಗಲು ಇದೇ ಸಮಯವಾಗಿದೆ.
ಓಂ ಶಾಂತಿ.
ತಂದೆಯೇ ಪ್ರತಿನಿತ್ಯವೂ ಮಕ್ಕಳೊಂದಿಗೆ ಕೇಳುತ್ತಾರೆ. ಶಿವ ತಂದೆಗೆ ಮಕ್ಕಳು-ಮರಿಯಿರುವವರೆಂದು
ಹೇಳುವುದಿಲ್ಲ. ಆತ್ಮಗಳಂತೂ ಅನಾದಿಯಾಗಿದ್ದಾರೆ. ತಂದೆಯೂ ಅನಾದಿಯಾಗಿದ್ದಾರೆ. ಈ ಸಮಯದಲ್ಲಿ ತಂದೆ
ಮತ್ತು ದಾದಾ - ಇಬ್ಬರೂ ಜೊತೆಯಿದ್ದಾಗಲೇ ಮಕ್ಕಳ ಸಂಭಾಲನೆಯಾಗುತ್ತದೆ. ಎಷ್ಟೊಂದು ಮಂದಿ
ಮಕ್ಕಳಿದ್ದಾರೆ, ಅವರ ಸಂಭಾಲನೆ ಮಾಡಲಾಗುತ್ತದೆ. ಪ್ರತಿಯೊಬ್ಬರ ಲೆಕ್ಕ ಪತ್ರವನ್ನಿಡಬೇಕಾಗುತ್ತದೆ.
ಹೇಗೆ ಲೌಕಿಕ ತಂದೆಗೂ ಸಹ ಚಿಂತೆಯಿರುತ್ತದೆಯಲ್ಲವೆ. ನಮ್ಮ ಮಗನೂ ಸಹ ಈ ಬ್ರಾಹ್ಮಣ ಕುಲದಲ್ಲಿ ಬಂದು
ಬಿಟ್ಟರೆ ಒಳ್ಳೆಯದು, ನಮ್ಮ ಮಕ್ಕಳೂ ಸಹ ಪವಿತ್ರರಾಗಿ ಪವಿತ್ರ ಪ್ರಪಂಚದಲ್ಲಿ ಹೋಗಲಿ ಎಂದು
ಬಯಸುತ್ತಾರಲ್ಲವೆ. ಎಲ್ಲಿಯೂ ಈ ಹಳೆಯ ಮಾಯೆಯ ನಾಲೆಯಲ್ಲಿ ಮುಳುಗದಿರಲಿ ಎಂದು ಚಿಂತೆಯಿರುತ್ತದೆ.
ಬೇಹದ್ದಿನ ತಂದೆಗೂ ಸಹ ಮಕ್ಕಳ ಚಿಂತೆಯಿರುತ್ತದೆ. ಎಷ್ಟೊಂದು ಸೇವಾಕೇಂದ್ರಗಳಿವೆ,
ಸುರಕ್ಷಿತರಾಗಿರಬೇಕೆಂದರೆ ಯಾವ ಮಕ್ಕಳನ್ನು ಎಲ್ಲಿ ಕಳುಹಿಸಬೇಕೋ ಎಂದು ವಿಚಾರ ಮಾಡಬೇಕಾಗುತ್ತದೆ.
ಇತ್ತೀಚೆಗಂತೂ ರಕ್ಷಣೆಯೇ ಇಲ್ಲದಂತಾಗಿದೆ. ಪ್ರಪಂಚದಲ್ಲಿ ಯಾರಿಗೂ ಸುರಕ್ಷತೆಯಿಲ್ಲ. ಸ್ವರ್ಗದಲ್ಲಿ
ಪ್ರತಿಯೊಬ್ಬರಿಗೂ ರಕ್ಷಣೆಯಿರುತ್ತದೆ. ಇಲ್ಲಿ ಯಾರಿಗೂ ರಕ್ಷಣೆಯಿಲ್ಲ. ಎಲ್ಲದರೊಂದು ಕಡೆ
ವಿಕಾರಗಳೆಂಬ ಮಾಯೆಯ ಮುಷ್ಟಿಯಲ್ಲಿ ಸಿಕ್ಕಿ ಬೀಳುತ್ತಾರೆ. ಈಗ ನೀವಾತ್ಮಗಳಿಗೆ ವಿದ್ಯೆಯು
ಸಿಗುತ್ತಿದೆ. ಸತ್ಯ ತಂದೆಯ ಸಂಗವೂ ಇಲ್ಲಿದೆ. ಇಲ್ಲಿಯೇ ದುಃಖಧಾಮದಿಂದ ದೂರ, ಸುಖಧಾಮದಲ್ಲಿ
ಹೋಗಬೇಕಾಗಿದೆ ಏಕೆಂದರೆ ಈಗ ಮಕ್ಕಳಿಗೆ ಸುಖಧಾಮವೆಂದರೇನು, ದುಃಖಧಾಮವೆಂದರೇನೆಂದು ಅರ್ಥವಾಗಿದೆ.
ಅವಶ್ಯವಾಗಿ ಈಗ ದುಃಖಧಾಮವಾಗಿದೆ. ನಾವು ಬಹಳ ಪಾಪಗಳನ್ನು ಮಾಡಿದ್ದೇವೆ ಮತ್ತು ಸತ್ಯಯುಗದಲ್ಲಿ
ಪುಣ್ಯಾತ್ಮರಾಗಿರುತ್ತೇವೆ ಅಂದಮೇಲೆ ನಾವೀಗ ಪುಣ್ಯಾತ್ಮರಾಗಬೇಕಾಗಿದೆ. ಈಗ ಪ್ರತಿಯೊಬ್ಬರೂ ಸಹ
ತಮ್ಮ 84 ಜನ್ಮಗಳ ಚರಿತ್ರೆ-ಭೂಗೋಳವನ್ನೂ ಅರಿತುಕೊಂಡಿದ್ದೀರಿ. ಪ್ರಪಂಚದಲ್ಲಿ ಮತ್ತ್ಯಾರೂ 84
ಜನ್ಮಗಳ ಚರಿತ್ರೆ-ಭೂಗೋಳವನ್ನು ತಿಳಿದುಕೊಂಡಿಲ್ಲ. ಈಗ ತಂದೆಯು ಬಂದು ಇಡೀ ಜೀವನ ಕಥೆಯನ್ನು
ತಿಳಿಸಿದ್ದಾರೆ. ನಾವೀಗ ನೆನಪಿನ ಯಾತ್ರೆಯಿಂದ ಪುಣ್ಯಾತ್ಮರಾಗಬೇಕೆಂದು ನಿಮಗೀಗ ತಿಳಿದಿದೆ.
ಇದರಲ್ಲಿ ಉದಾಸೀನ ಮಾಡುವುದರಿಂದ ಅನೇಕರು ಮೋಸ ಹೋಗುತ್ತಾರೆ. ತಂದೆಯು ತಿಳಿಸುತ್ತಾರೆ - ಈ
ಸಮಯದಲ್ಲಿ ಉದಾಸೀನತೆಯು ಒಳ್ಳೆಯದಲ್ಲ, ಶ್ರೀಮತದಂತೆ ನಡೆಯಬೇಕಾಗಿದೆ. ಅದರಲ್ಲಿಯೇ ಮುಖ್ಯ ಮಾತನ್ನು
ತಂದೆಯು ತಿಳಿಸುತ್ತಾರೆ - ಮಕ್ಕಳೇ, ಮೊದಲನೆಯದಾಗಿ ನೆನಪಿನ ಯಾತ್ರೆಯಲ್ಲಿರಿ. ಎರಡನೆಯದಾಗಿ ಕಾಮ
ಮಹಾ ಶತ್ರುವಿನ ಮೇಲೆ ಜಯ ಗಳಿಸಿರಿ. ತಂದೆಯನ್ನು ಎಲ್ಲರೂ ಕರೆಯುತ್ತಾರೆ ಏಕೆಂದರೆ ಅವರಿಂದ
ಆತ್ಮಗಳಿಗೆ ಸುಖ ಮತ್ತು ಶಾಂತಿಯ ಆಸ್ತಿಯು ಸಿಗುತ್ತದೆ. ಮೊದಲು ದೇಹಾಭಿಮಾನಿಗಳಾಗಿದ್ದಾಗ ಏನೂ
ಅರ್ಥವಾಗುತ್ತಿರಲಿಲ್ಲ. ಈಗ ನೀವು ಮಕ್ಕಳನ್ನು ಆತ್ಮಾಭಿಮಾನಿಗಳನ್ನಾಗಿ ಮಾಡುತ್ತಾರೆ. ಹೊಸಬರಿಗೆ
ಮೊಟ್ಟ ಮೊದಲಿಗೆ ಒಬ್ಬರು ಲೌಕಿಕ ತಂದೆ, ಇನ್ನೊಬ್ಬರು ಪಾರಲೌಕಿಕ ತಂದೆಯ ಪರಿಚಯ ಕೊಡಬೇಕಾಗಿದೆ.
ಬೇಹದ್ದಿನ ತಂದೆಯಿಂದ ಸ್ವರ್ಗ ಪ್ರಾಪ್ತಿಯಾಗುತ್ತದೆ. ಹದ್ದಿನ ತಂದೆಯಿಂದ ನರಕವು
ಪ್ರಾಪ್ತಿಯಾಗುತ್ತದೆ. ಮಗನು ಯಾವಾಗ ಬೆಳೆದು ದೊಡ್ಡವನಾಗುವನೋ ಆಗ ಆಸ್ತಿಗೆ ಹಕ್ಕುದಾರನಾಗುತ್ತಾನೆ.
ಯಾವಾಗ ತಿಳುವಳಿಕೆ ಬರುವುದೋ ಆಗ ನಿಧಾನ-ನಿಧಾನವಾಗಿ ಮಾಯೆಗೆ ಅಧೀನರಾಗಿ ಬಿಡುತ್ತಾರೆ. ಇವೆಲ್ಲವೂ
ರಾವಣ ರಾಜ್ಯದ ರೀತಿ-ಪದ್ಧತಿಗಳಾಗಿವೆ. ನೀವೀಗ ತಿಳಿದುಕೊಂಡಿದ್ದೀರಿ - ಈ ಪ್ರಪಂಚವು ಬದಲಾಗುತ್ತಿದೆ,
ಈ ಹಳೆಯ ಪ್ರಪಂಚದ ವಿನಾಶವಾಗುತ್ತಿದೆ. ಒಂದು ಗೀತೆಯಲ್ಲಿಯೇ ವಿನಾಶದ ವರ್ಣನೆಯಿದೆ. ಮತ್ತ್ಯಾವುದೇ
ಶಾಸ್ತ್ರದಲ್ಲಿ ಮಹಾಭಾರಿ ಮಹಾಭಾರತ ಯುದ್ಧದ ವರ್ಣನೆಯಿಲ್ಲ. ಈ ಪುರುಷೋತ್ತಮ ಸಂಗಮಯುಗವೇ ಗೀತೆಯ
ಸಮಯವಾಗಿದೆ. ಗೀತಾಯುಗವೆಂದರೆ ಆದಿ ಸನಾತನ ದೇವಿ-ದೇವತಾ ಧರ್ಮದ ಸ್ಥಾಪನೆ. ಗೀತೆಯು ದೇವಿ-ದೇವತಾ
ಧರ್ಮದ ಶಾಸ್ತ್ರವಾಗಿದೆ ಅಂದಾಗ ಇದು ಗೀತೆಯ ಯುಗವೇ ಆಗಿದೆ. ಈಗ ಹೊಸ ಪ್ರಪಂಚವು
ಸ್ಥಾಪನೆಯಾಗುತ್ತಿದೆ. ಮನುಷ್ಯರೂ ಸಹ ಪರಿವರ್ತನೆಯಾಗಬೇಕಾಗಿದೆ. ಮನುಷ್ಯರಿಂದ ದೇವತೆಗಳಾಗಬೇಕು.
ಹೊಸ ಪ್ರಪಂಚದಲ್ಲಿ ಅವಶ್ಯವಾಗಿ ದೈವೀ ಗುಣವಂತ ಮನುಷ್ಯರು ಬೇಕಲ್ಲವೆ. ಈ ಮಾತುಗಳನ್ನು ಪ್ರಪಂಚದವರು
ತಿಳಿದುಕೊಂಡಿಲ್ಲ. ಅವರು ಕಲ್ಪದ ಆಯಸ್ಸು ಬಹಳಷ್ಟು ಸಮಯವನ್ನು ಕೊಟ್ಟಿದ್ದಾರೆ. ಈಗ ನೀವು ಮಕ್ಕಳಿಗೆ
ತಂದೆಯು ತಿಳಿಸುತ್ತಿದ್ದಾರೆ - ನೀವು ತಿಳಿದುಕೊಳ್ಳುತ್ತೀರಿ - ಅವಶ್ಯವಾಗಿ ತಂದೆಯು ನಮಗೆ
ಓದಿಸುತ್ತಾರೆ, ಕೃಷ್ಣನಿಗೆಂದೂ ತಂದೆ, ಶಿಕ್ಷಕ, ಗುರುವೆಂದು ಹೇಳಲು ಸಾಧ್ಯವಿಲ್ಲ. ಕೃಷ್ಣನು
ಶಿಕ್ಷಕನಾಗಿದ್ದರೆ ಕೃಷ್ಣನೆಲ್ಲಿಂದ ಕಲಿತನು? ಕೃಷ್ಣನಿಗೆ ಜ್ಞಾನ ಸಾಗರನೆಂದು ಹೇಳಲು ಸಾಧ್ಯವಿಲ್ಲ.
ನೀವು ಮಕ್ಕಳೀಗ
ದೊಡ್ಡ-ದೊಡ್ಡವರಿಗೆ ತಿಳಿಸಬೇಕಾಗಿದೆ, ಪರಸ್ಪರ ಸೇರಿ ಹೇಗೆ ಸರ್ವೀಸ್ ವೃದ್ಧಿ ಮಾಡಬೇಕು, ಹೇಗೆ
ವಿಹಂಗ ಮಾರ್ಗದ ಸೇವೆಯಾಗುವುದೆಂಬ ಸಲಹೆಯನ್ನು ತೆಗೆದುಕೊಳ್ಳಬೇಕಾಗಿದೆ. ಈಗಂತೂ ಬ್ರಹ್ಮಾಕುಮಾರಿಯರ
ಪ್ರತಿ ಎಷ್ಟೊಂದು ಗಲಾಟೆಗಳನ್ನು ಮಾಡುತ್ತಾರೆ! ಕೊನೆಗೊಂದುದಿನ ಇವರು ಸತ್ಯವಂತರಾಗಿದ್ದಾರೆ
ಎಂಬುದನ್ನು ತಿಳಿದುಕೊಳ್ಳುತ್ತಾರೆ ಬಾಕಿ ಪ್ರಪಂಚವಂತೂ ಅಸತ್ಯವಾಗಿದೆ, ಆದ್ದರಿಂದ ಸತ್ಯದ
ದೋಣಿಯನ್ನು ಅಲುಗಾಡಿಸುತ್ತಿರುತ್ತಾರೆ. ಬಿರುಗಾಳಿಗಳು ಬರುತ್ತವೆಯಲ್ಲವೆ. ನೀವು ದೋಣಿಯಾಗಿದ್ದೀರಿ,
ಪಾರಾಗುತ್ತೀರಿ. ನಿಮಗೆ ತಿಳಿದಿದೆ - ನಾವು ಈ ಮಾಯಾವೀ ಪ್ರಪಂಚದಿಂದ ದೂರ ಹೋಗಬೇಕಾಗಿದೆ.
ಎಲ್ಲದಕ್ಕಿಂತ ಮೊದಲನೆಯದಾಗಿ ದೇಹಾಭಿಮಾನದ ಬಿರುಗಾಳಿಯು ಬರುತ್ತದೆ. ಇದು ಎಲ್ಲದಕ್ಕಿಂತ
ಕೆಟ್ಟದಾಗಿದೆ. ಇದೇ ಎಲ್ಲರನ್ನೂ ಪತಿತರನ್ನಾಗಿ ಮಾಡಿದೆ. ಆದ್ದರಿಂದಲೇ ತಂದೆಯು ತಿಳಿಸುತ್ತಾರೆ -
ಕಾಮ ಮಹಾಶತ್ರುವಾಗಿದೆ. ಇದು ಬಹಳ ತೀಕ್ಷ್ಣವಾದ ಬಿರುಗಾಳಿಯಾಗಿದೆ. ಇದರ ಮೇಲೆ ಜಯ ಗಳಿಸಿರುವವರೂ
ಕೆಲವರಿದ್ದಾರೆ, ಗೃಹಸ್ಥ ವ್ಯವಹಾರದಲ್ಲಿ ಹೋಗಿದ್ದಾರೆ ಮತ್ತೆ ಅದರಿಂದ ಪಾರಾಗುವ ಪ್ರಯತ್ನ
ಪಡುತ್ತಾರೆ. ಕುಮಾರ-ಕುಮಾರಿಯರಿಗಂತೂ ಬಹಳ ಸಹಜವಾಗಿದೆ. ಆದ್ದರಿಂದ ಕನ್ನಯ್ಯನೆಂಬ ಹೆಸರಿನಿಂದ
ಗಾಯನ ಮಾಡಲಾಗಿದೆ. ಇಷ್ಟೊಂದು ಕನ್ಯೆಯರು ಅವಶ್ಯವಾಗಿ ಶಿವ ತಂದೆಗೇ ಇರುವರು. ದೇಹಧಾರಿ
ಶ್ರೀಕೃಷ್ಣನಿಗೆ ಇಷ್ಟೊಂದು ಮಂದಿ ಕನ್ಯೆಯರಿರಲು ಸಾಧ್ಯವಿಲ್ಲ. ನೀವು ಈ ವಿದ್ಯೆಯಿಂದ ಪಟ್ಟದ
ರಾಣಿಯರಾಗುತ್ತಿದ್ದೀರಿ, ಇದರಲ್ಲಿ ಮುಖ್ಯ ಮಾತು ಪವಿತ್ರತೆಯಿರಬೇಕು. ತಮ್ಮನ್ನು ತಾವು ನೋಡಿಕೊಳ್ಳಿ
- ನೆನಪಿನ ಚಾರ್ಟ್ ಸರಿಯಿದೆಯೇ? ತಂದೆಯ ಬಳಿ ಕೆಲವರದು 5 ಗಂಟೆಗಳದು, ಇನ್ನೂ ಕೆಲವರದು 2-3
ಗಂಟೆಗಳ ಚಾರ್ಟ್ ಬರುತ್ತದೆ. ಕೆಲವರಾದರೆ ಬರೆಯುವುದೇ ಇಲ್ಲ. ಬಹಳ ಕಡಿಮೆ ನೆನಪು ಮಾಡುತ್ತಾರೆ.
ಎಲ್ಲರ ಯಾತ್ರೆಯು ಏಕರಸವಾಗಿರಲು ಸಾಧ್ಯವಿಲ್ಲ. ಮುಂದೆ ಇನ್ನೂ ಬಹಳ ಮಂದಿ ಮಕ್ಕಳು
ವೃದ್ಧಿಯಾಗುತ್ತಾರೆ. ಪ್ರತಿಯೊಬ್ಬರೂ ತಮ್ಮ ಚಾರ್ಟನ್ನು ನೋಡಿಕೊಳ್ಳಿ- ನಾನು ಎಲ್ಲಿಯವರೆಗೆ
ಪದವಿಯನ್ನು ಪಡೆಯುತ್ತೇನೆ? ನನ್ನಲ್ಲಿ ಎಷ್ಟು ಖುಷಿಯಿದೆ? ಯಾವಾಗ ನಾವು ಶ್ರೇಷ್ಠಾತಿ ಶ್ರೇಷ್ಠ
ತಂದೆಯ ಮಕ್ಕಳಾಗಿದ್ದೇವೆ ಅಂದಮೇಲೆ ನಮಗೆ ಸದಾ ಖುಷಿಯು ಏಕಿರಬಾರದು! ಡ್ರಾಮಾನುಸಾರ ನೀವು ಬಹಳ
ಭಕ್ತಿ ಮಾಡಿದ್ದೀರಿ. ಹೇಗೆ ಭಕ್ತರಿಗೆ ಫಲವನ್ನು ಕೊಡುವುದಕ್ಕಾಗಿಯೇ ತಂದೆಯು ಬಂದಿದ್ದಾರೆ. ರಾವಣ
ರಾಜ್ಯದಲ್ಲಂತೂ ವಿಕರ್ಮಗಳು ಖಂಡಿತ ಆಗುತ್ತವೆ. ನೀವು ಸತೋಪ್ರಧಾನ ಪ್ರಪಂಚದಲ್ಲಿ ಹೋಗುವ
ಪುರುಷಾರ್ಥ ಮಾಡುತ್ತೀರಿ. ಯಾರು ಪೂರ್ಣ ಪುರುಷಾರ್ಥ ಮಾಡುವುದಿಲ್ಲವೋ ಅವರು ಸತೋದಲ್ಲಿ ಬರುತ್ತಾರೆ.
ಎಲ್ಲರೂ ಇಷ್ಟು ಜ್ಞಾನವನ್ನು ತೆಗೆದುಕೊಳ್ಳುತ್ತಾರೆಯೇ! ಸಂದೇಶವನ್ನಂತೂ ಅವಶ್ಯವಾಗಿ ತಿಳಿಸಬೇಕು
ನಂತರ ಎಲ್ಲಿದ್ದರೂ ಸರಿಯೆ. ಆದ್ದರಿಂದ ಮೂಲೆ-ಮೂಲೆಗೂ ಹೋಗಬೇಕಾಗಿದೆ. ವಿದೇಶದಲ್ಲಿಯೂ ಸಹ ಈ
ಸಂದೇಶವನ್ನು ಕೊಡಬೇಕು. ಹೇಗೆ ಬೌದ್ಧರು, ಕ್ರಿಶ್ಚಿಯನ್ನರದು ಇಲ್ಲಿ ಸಂಸ್ಥೆಗಳಿವೆಯಲ್ಲವೆ. ಅನ್ಯ
ಧರ್ಮದವರನ್ನು ತಮ್ಮ ಧರ್ಮದಲ್ಲಿ ತರುವ ಸಂಸ್ಥೆಯಿರುತ್ತದೆ. ನೀವೂ ಸಹ ತಿಳಿಸುತ್ತೀರಿ - ನಾವು
ಮೂಲತಃ ದೇವಿ-ದೇವತಾ ಧರ್ಮದವರಾಗಿದ್ದೆವು, ಈಗ ಹಿಂದೂ ಧರ್ಮದವರಾಗಿ ಬಿಟ್ಟಿದ್ದೇವೆ. ನಿಮ್ಮ ಬಳಿ
ಬಹಳಷ್ಟು ಮಂದಿ ಹಿಂದೂ ಧರ್ಮದವರೇ ಬರುತ್ತಾರೆ. ಅವರಲ್ಲಿಯೂ ಯಾರು ಶಿವನ, ದೇವತೆಗಳ
ಪೂಜಾರಿಗಳಾಗಿರುವರೋ ಅವರೇ ಬರುತ್ತಾರೆ. ಹೇಗೆ ತಂದೆಯು ರಾಜರುಗಳ ಸೇವೆ ಮಾಡಿ ಎಂದು ಹೇಳಿದರು. ಅವರು
ಬಹಳ ಮಟ್ಟಿಗೆ ದೇವತೆಗಳ ಪೂಜಾರಿಗಳಾಗಿರುತ್ತಾರೆ. ಅವರ ಮನೆಯಲ್ಲಿ ಮಂದಿರಗಳಿರುತ್ತವೆ. ಅವರ
ಕಲ್ಯಾಣವನ್ನೂ ಮಾಡಬೇಕಾಗಿದೆ. ನಾವು ತಂದೆಯ ಜೊತೆ ದೂರದೇಶದಿಂದ ಬಂದಿದ್ದೇವೆಂದು ನೀವೂ ಸಹ
ತಿಳಿದುಕೊಳ್ಳಿ. ತಂದೆಯು ಹೊಸ ಪ್ರಪಂಚದ ಸ್ಥಾಪನೆ ಮಾಡುವುದಕ್ಕಾಗಿಯೇ ಬಂದಿದ್ದಾರೆ, ನೀವೂ
ಮಾಡುತ್ತಿದ್ದೀರಿ. ಯಾರು ಸ್ಥಾಪನೆ ಮಾಡುವರೋ ಅವರು ಪಾಲನೆಯನ್ನೂ ಮಾಡುತ್ತಾರೆ. ಒಳಗೆ ಈ ನಶೆಯಿರಲಿ
- ನಾವು ಶಿವ ತಂದೆಯ ಜೊತೆ ದೈವೀ ರಾಜ್ಯವನ್ನು ಸ್ಥಾಪನೆ ಮಾಡಲು ಇಡೀ ವಿಶ್ವವನ್ನು ಸ್ವರ್ಗವನ್ನಾಗಿ
ಮಾಡಲು ಬಂದಿದ್ದೇವೆ. ಆಶ್ಚರ್ಯವೇನೆಂದರೆ ಈ ದೇಶದಲ್ಲಿ ಏನೇನು ಮಾಡುತ್ತಿರುತ್ತಾರೆ? ಹೇಗೆ ಪೂಜೆ
ಮಾಡುತ್ತಾರೆ? ನವರಾತ್ರಿಯಲ್ಲಿ ದೇವಿಯರ ಪೂಜೆ ನಡೆಯುತ್ತದೆಯಲ್ಲವೆ. ರಾತ್ರಿಯಿದೆಯೆಂದರೆ ಹಗಲೂ
ಇರಬೇಕು. ನಿಮ್ಮದು ಒಂದು ಗೀತೆಯೂ ಇದೆಯಲ್ಲವೆ - ಎಂತಹ ಅದ್ಭುತವನ್ನು ನೋಡಿದೆ!...........
ಮಣ್ಣಿನ ಗೊಂಬೆಯನ್ನು ಮಾಡಿ, ಶೃಂಗಾರ ಮಾಡಿ ಅದರ ಪೂಜೆ ಮಾಡುತ್ತಾರೆ ಮತ್ತೆ ಅದರೊಂದಿಗೆ ಮನಸ್ಸಾಗಿ
ಬಿಡುತ್ತದೆಯೆಂದರೆ ಅದನ್ನು ಮುಳುಗಿಸುವ ಸಮಯದಲ್ಲಿ ಅಳತೊಡಗುತ್ತಾರೆ. ಮನುಷ್ಯರು ಮರಣ ಹೊಂದಿದಾಗ ಆ
ಅಸ್ತಿಯನ್ನು ತೆಗೆದುಕೊಂಡು ಹೋಗುತ್ತಾರೆ. ಹರಿ ಭೋಲ್, ಹರಿ ಭೋಲ್ ಎಂದು ಮುಳುಗಿಸುತ್ತಾರೆ.
ಬಹಳಷ್ಟು ಮಂದಿ ಹೋಗುತ್ತಾರಲ್ಲವೆ. ನದಿಯು ಸದಾ ಇರುತ್ತದೆ. ನಿಮಗೆ ತಿಳಿದಿದೆ - ಈ ಜಮುನಾ ನದಿಯ
ತೀರದಲ್ಲಿ ರಾಸ ಲೀಲೆಯನ್ನು ಮಾಡುತ್ತಿದ್ದರು, ಅಲ್ಲಂತೂ ದೊಡ್ಡ-ದೊಡ್ಡ ಮಹಲುಗಳಿರುತ್ತದೆ. ನೀವೇ
ಹೋಗಿ ಕಟ್ಟಿಸಬೇಕಾಗಿದೆ. ಯಾರಾದರೂ ದೊಡ್ಡ ಪರೀಕ್ಷೆಯನ್ನು ತೇರ್ಗಡೆ ಮಾಡಿದರೆ ನಾವು ತೇರ್ಗಡೆಯಾದ
ಮೇಲೆ ನಾವು ಮನೆ ಕಟ್ಟಿಸುತ್ತೇವೆ, ಹೀಗೆ ಮಾಡುತ್ತೇವೆ ಎಂದು ಅವರ ಬುದ್ಧಿಯಲ್ಲಿರುತ್ತದೆ. ನೀವು
ಮಕ್ಕಳಿಗೂ ಸಹ ಇದೇ ಚಿಂತನೆಯಿರಲಿ - ನಾವು ದೇವತೆಗಳಾಗುತ್ತೇವೆ, ಈಗ ನಾವು ನಮ್ಮ ಮನೆಗೆ
ಹೋಗುತ್ತೇವೆ. ಹೀಗೆ ಮನೆಯನ್ನು ನೆನಪು ಮಾಡಿ ಖುಷಿಯಾಗಬೇಕು. ಮನುಷ್ಯರು ಯಾತ್ರೆಯಿಂದ ಹಿಂತಿರುಗಿ
ಬಂದಾಗ ನಾವು ನಮ್ಮ ಮನೆಗೆ ಹೋಗುತ್ತೇವೆ ಎಲ್ಲಿ ನಮ್ಮ ಜನ್ಮವಾಗಿತ್ತು ಎಂದು ಖುಷಿಯಾಗುತ್ತದೆ.
ಹಾಗೆಯೇ ನಾವಾತ್ಮಗಳ ಮನೆಯೂ ಸಹ ಮೂಲವತನವಾಗಿದೆ, ಎಷ್ಟೊಂದು ಖುಷಿಯಾಗುತ್ತದೆ. ಮನುಷ್ಯರು
ಮುಕ್ತಿಗಾಗಿಯೇ ಬಹಳಷ್ಟು ಭಕ್ತಿ ಮಾಡುತ್ತಾರೆ ಆದರೆ ಡ್ರಾಮಾದಲ್ಲಿ ಪಾತ್ರವೇ ಹೀಗಿದೆ,
ಯಾರೊಬ್ಬರಿಗೂ ಹಿಂತಿರುಗಿ ಹೋಗಲು ಆಗುವುದಿಲ್ಲ. ನೀವು ತಿಳಿದುಕೊಂಡಿದ್ದೀರಿ - ಅವರೆಲ್ಲರೂ
ಅರ್ಧಕಲ್ಪ ಪಾತ್ರವನ್ನಭಿನಯಿಸಲೇಬೇಕಾಗಿದೆ. ನಮ್ಮದು ಈಗ 84 ಜನ್ಮಗಳು ಪೂರ್ಣವಾಗುತ್ತವೆ, ಈಗ ಮರಳಿ
ಹೋಗಬೇಕು ಮತ್ತು ರಾಜಧಾನಿಯಲ್ಲಿ ಬರುತ್ತೇವೆ. ಕೇವಲ ಮನೆ ಮತ್ತು ರಾಜಧಾನಿಯು ನೆನಪಿರಲಿ. ಕೆಲವರಿಗೆ
ಇಲ್ಲಿ ಕುಳಿತಿದ್ದರೂ ಸಹ ತಮ್ಮ ಕಾರ್ಖಾನೆ ಇತ್ಯಾದಿಗಳ ನೆನಪಿರುತ್ತದೆ. ಹೇಗೆ ನೋಡಿ,
ಬಿರ್ಲಾದವರಿದ್ದಾರೆ, ಅವರಿಗೆ ಎಷ್ಟೊಂದು ಕಾರ್ಖಾನೆಗಳಿವೆ, ಇಡೀ ದಿನ ಅದರದ್ದೇ ಚಿಂತನೆ
ನಡೆಯುತ್ತಿರುತ್ತದೆ. ಅವರಿಗೆ ಒಂದುವೇಳೆ ತಂದೆಯನ್ನು ನೆನಪು ಮಾಡಿ ಎಂದು ಹೇಳಿದರೂ ಸಹ ಅವರ
ಬುದ್ಧಿಯು ಉದ್ಯೋಗ-ವ್ಯವಹಾರಗಳಲ್ಲಿ ಸಿಕ್ಕಿ ಹಾಕಿಕೊಂಡಿರುತ್ತದೆ. ಪದೇ-ಪದೇ ಅದರದ್ದೇ ನೆನಪು
ಬರುತ್ತಿರುತ್ತದೆ. ಎಲ್ಲರಿಗಿಂತ ಮಾತೆಯರಿಗೆ ನೆನಪು ಮಾಡುವುದು ಸಹಜವಾಗಿದೆ. ಅವರಿಗಿಂತಲೂ
ಕನ್ಯೆಯರಿಗೆ ಇನ್ನೂ ಸಹಜವಾಗುತ್ತದೆ. ಇಲ್ಲಿ ಜೀವಿಸಿದ್ದಂತೆಯೇ ಸಾಯಬೇಕು, ಇಡೀ ಪ್ರಪಂಚವನ್ನೇ
ಮರೆಯಬೇಕಾಗಿದೆ. ನೀವು ತಮ್ಮನ್ನು ಆತ್ಮನೆಂದು ತಿಳಿದು ಶಿವ ತಂದೆಯ ಮಕ್ಕಳಾಗುತ್ತೀರಿ, ಇದಕ್ಕೆ
ಜೀವಿಸಿದ್ದಂತೆಯೇ ಸಾಯುವುದು ಎಂದು ಹೇಳಲಾಗುತ್ತದೆ. ದೇಹ ಸಹಿತವಾಗಿ ದೇಹದ ಎಲ್ಲಾ ಸಂಬಂಧಗಳನ್ನು
ಬಿಟ್ಟು ತನ್ನನ್ನು ಆತ್ಮನೆಂದು ತಿಳಿದು ಶಿವ ತಂದೆಯ ಮಕ್ಕಳಾಗಬೇಕಾಗಿದೆ. ಶಿವ ತಂದೆಯನ್ನು ನೆನಪು
ಮಾಡುತ್ತಿರಬೇಕು ಏಕೆಂದರೆ ತಲೆಯ ಮೇಲೆ ಪಾಪಗಳ ಹೊರೆ ಬಹಳಷ್ಟಿದೆ. ನಾವು ಜೀವಿಸಿದ್ದಂತೆಯೇ ಸತ್ತು
ಶಿವ ತಂದೆಯ ಮಕ್ಕಳಾಗಿ ಬಿಡಬೇಕೆಂದು ಎಲ್ಲರಿಗೂ ಇಷ್ಟವಾಗುತ್ತದೆ. ಶರೀರದ ಭಾನವು ಇರಬಾರದು. ನಾವು
ಅಶರೀರಿಯಾಗಿ ಬಂದೆವು ಮತ್ತೆ ಅಶರೀರಿಯಾಗಿ ಹೋಗಬೇಕಾಗಿದೆ. ತಂದೆಯ ಮಕ್ಕಳಾಗಿದ್ದೇವೆ ಅಂದಮೇಲೆ
ತಂದೆಯ ವಿನಃ ಮತ್ತ್ಯಾರ ನೆನಪೂ ಇರಬಾರದು. ಈ ಸ್ಥಿತಿಯು ಬೇಗನೆ ಬಂದು ಬಿಟ್ಟರೆ ಯುದ್ಧವು ಬಹಳ
ಬೇಗನೆ ಆಗುವುದು. ತಂದೆಯು ಇಷ್ಟೊಂದು ತಿಳಿಸುತ್ತಾರೆ, ನಾವಂತೂ ಶಿವ ತಂದೆಯ ಮಕ್ಕಳಲ್ಲವೆ. ನಾವು
ಅಲ್ಲಿನ ನಿವಾಸಿಗಳಾಗಿದ್ದೇವೆ, ಇಲ್ಲಂತೂ ಬಹಳ ದುಃಖವಿದೆ. ಇದು ಅಂತಿಮ ಜನ್ಮವಾಗಿದೆ, ತಂದೆಯು
ತಿಳಿಸಿದ್ದಾರೆ - ನೀವು ಸತೋಪ್ರಧಾನರಾಗಿದ್ದಾಗ ಮತ್ತ್ಯಾರೂ ಇರಲಿಲ್ಲ. ನೀವು ಎಷ್ಟೊಂದು
ಸಾಹುಕಾರರಾಗಿದ್ದೀರಿ! ಭಲೆ ಈ ಸಮಯದಲ್ಲಿ ಹಣವಿದೆ ಆದರೆ ಇದೇನೂ ಇಲ್ಲ. ಇವು ಕವಡೆಗಳಾಗಿದೆ.
ಇವೆಲ್ಲವೂ ಅಲ್ಪಕಾಲದ ಸುಖಕ್ಕಾಗಿ ಇದೆ. ತಂದೆಯು ತಿಳಿಸಿದ್ದಾರೆ - ಹಿಂದೆ ಬಹಳ ದಾನ-ಪುಣ್ಯಗಳನ್ನು
ಮಾಡಿದ್ದರೆ ಬಹಳಷ್ಟು ಹಣವು ಸಿಗುತ್ತದೆ ಮತ್ತೆ ದಾನ ಮಾಡುತ್ತಾರೆ ಆದರೆ ಅದು ಒಂದು ಜನ್ಮದ
ಮಾತಾಗಿದೆ. ಇಲ್ಲಂತೂ ಜನ್ಮ-ಜನ್ಮಾಂತರಕ್ಕಾಗಿ ಸಾಹುಕಾರರಾಗುತ್ತೀರಿ. ಎಷ್ಟು ದೊಡ್ಡ ಹೆಸರುವಾಸಿಯೋ
ಅಷ್ಟು ದೊಡ್ಡ ದುಃಖ ಪಡೆಯುತ್ತಾರೆ. ಯಾರಿಗೆ ಬಹಳ ಹಣವಿದೆಯೋ ಅಂತಹವರು ಅದರಲ್ಲಿಯೇ ಬಹಳ ಸಿಕ್ಕಿ
ಹಾಕಿಕೊಂಡಿದ್ದಾರೆ. ಅವರೆಂದೂ ಇಲ್ಲಿ ನಿಲ್ಲಲು ಸಾಧ್ಯವಿಲ್ಲ. ಸಾಧಾರಣ ಬಡವರೇ ಸಮರ್ಪಿತರಾಗುತ್ತಾರೆ,
ಸಾಹುಕಾರರೆಂದೂ ಆಗುವುದಿಲ್ಲ. ನಮ್ಮ ಮಕ್ಕಳು-ಮೊಮ್ಮಕ್ಕಳವರೆಗೂ ತಿನ್ನುತ್ತಿರಲಿ ಎಂದು ಸಂಪಾದನೆ
ಮಾಡುತ್ತಾರೆ. ಆದರೆ ತಾವೇನು ಅದೇ ಮನೆಯಲ್ಲಿ ಬರುವವರಲ್ಲ. ಯಾರು ಒಳ್ಳೆಯ ಕರ್ಮ ಮಾಡಿದ್ದಾರೆಯೋ
ಅವರ ಮಕ್ಕಳು-ಮೊಮ್ಮಕ್ಕಳಾಗಿ ಬರುತ್ತಾರೆ. ಹೇಗೆ ಯಾರು ಬಹಳ ದಾನ ಮಾಡುವರೋ ಅವರು ರಾಜ್ಯ
ಮಾಡುತ್ತಾರೆ ಆದರೆ ಆರೋಗ್ಯವಂತರಂತೂ ಆಗಿರುವುದಿಲ್ಲ ಅವಿನಾಶಿ ಸುಖವಿಲ್ಲವೆಂದ ಮೇಲೆ ರಾಜ್ಯ ಭಾರ
ಮಾಡಿ ಏನು ಲಾಭ? ಈ ಕಲಿಯುಗದಲ್ಲಿ ಹೆಜ್ಜೆ-ಹೆಜ್ಜೆಯಲ್ಲಿ ಅನೇಕ ಪ್ರಕಾರದ ದುಃಖವೇ ಸಿಗುತ್ತದೆ.
ಸತ್ಯಯುಗದಲ್ಲಿ ಇವೆಲ್ಲಾ ದುಃಖಗಳು ದೂರವಾಗಿ ಬಿಡುತ್ತದೆ. ನಮ್ಮ ದುಃಖವನ್ನು ದೂರ ಮಾಡಿ ಎಂದು
ತಂದೆಯನ್ನು ಕರೆಯುತ್ತಾರೆ ಆದರೆ ದುಃಖವೆಲ್ಲವೂ ದೂರವಾಗಲಿದೆ ಎಂಬುದನ್ನು ನೀವು
ತಿಳಿದುಕೊಂಡಿದ್ದೀರಿ. ಕೇವಲ ಶಿವ ತಂದೆಯನ್ನು ನೆನಪು ಮಾಡುತ್ತಾ ಇರಿ. ಒಬ್ಬ ತಂದೆಯ ವಿನಃ
ಮತ್ತ್ಯಾರಿಂದಲೂ ಆಸ್ತಿಯು ಸಿಗಲು ಸಾಧ್ಯವಿಲ್ಲ. ತಂದೆಯು ಇಡೀ ವಿಶ್ವದ ದುಃಖವನ್ನು ದೂರ
ಮಾಡುತ್ತಾರೆ. ಈ ಸಮಯದಲ್ಲಿ ಪ್ರಾಣಿ-ಪಕ್ಷಿಗಳೂ ಸಹ ಎಷ್ಟೊಂದು ದುಃಖಿಯಾಗಿವೆ. ಈ ಪ್ರಪಂಚವೇ
ದುಃಖಧಾಮವಾಗಿದೆ, ದುಃಖವು ಇನ್ನೂ ಹೆಚ್ಚುತ್ತಲೇ ಹೋಗುತ್ತದೆ. ತಮೋಪ್ರಧಾನರಾಗುತ್ತಾ ಹೋಗುತ್ತಾರೆ.
ನಾವೀಗ ಸಂಗಮಯುಗದಲ್ಲಿ ಕುಳಿತಿದ್ದೇವೆ, ಅವರೆಲ್ಲರೂ ಕಲಿಯುಗದಲ್ಲಿ ಕುಳಿತಿದ್ದಾರೆ. ಇದು
ಪುರುಷೋತ್ತಮ ಸಂಗಮಯುಗವಾಗಿದೆ. ತಂದೆಯು ನಮ್ಮನ್ನು ಪುರುಷೋತ್ತಮರನ್ನಾಗಿ ಮಾಡುತ್ತಿದ್ದರು. ಇದು
ನೆನಪಿದ್ದರೂ ಸಹ ಖುಷಿಯಿರುವುದು. ಭಗವಂತನೇ ಓದಿಸುತ್ತಾರೆ, ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ.
ಇದನ್ನು ಭಲೆ ನೆನಪು ಮಾಡಿ. ನಾವು ಅವರ ಮಕ್ಕಳೆಂದ ಮೇಲೆ ವಿದ್ಯೆಯಿಂದ ಭಗವಾನ್-ಭಗವತಿಯರಾಗಬೇಕಲ್ಲವೆ.
ಭಗವಂತನು ಸುಖ ಕೊಡುವವರಾಗಿದ್ದಾರೆ, ಮತ್ತೆ ದುಃಖವು ಹೇಗೆ ಸಿಗುತ್ತದೆ? ಅದನ್ನು ತಂದೆಯು ಕುಳಿತು
ತಿಳಿಸುತ್ತಾರೆ. ಭಗವಂತನ ಮಕ್ಕಳು ಮತ್ತೆ ದುಃಖದಲ್ಲಿ ಏಕೆ ಇದ್ದಾರೆ? ಭಗವಂತನು ದುಃಖಹರ್ತ,
ಸುಖಕರ್ತನೆಂದರೆ ಅವಶ್ಯವಾಗಿ ದುಃಖದ ಸಮಯದಲ್ಲಿಯೇ ಬರುತ್ತಾರೆ, ಆದ್ದರಿಂದಲೇ ಹಾಡುತ್ತಾರೆ. ಆ
ತಂದೆಯು ನಮಗೆ ರಾಜಯೋಗವನ್ನು ಕಲಿಸುತ್ತಿದ್ದಾರೆ, ನಾವು ಪುರುಷಾರ್ಥ ಮಾಡುತ್ತಿದ್ದೇವೆಂದು ನಿಮಗೆ
ತಿಳಿದಿದೆ. ಇದರಲ್ಲಿ ಸಂಶಯವಿರಲು ಸಾಧ್ಯವಿಲ್ಲ! ನಾವು ಬ್ರಹ್ಮಾಕುಮಾರ-ಕುಮಾರಿಯರು ರಾಜಯೋಗವನ್ನು
ಕಲಿಯುತ್ತಿದ್ದೇವೆ. ಸುಳ್ಳು ಹೇಳಲು ಸಾಧ್ಯವೇ? ಯಾರಿಗಾದರೂ ಈ ಸಂಶಯ ಬಂದರೆ ತಿಳಿಸಿ ಕೊಡಿ - ಇದಂತೂ
ವಿದ್ಯೆಯಾಗಿದೆ ವಿನಾಶವು ಸನ್ಮುಖದಲ್ಲಿ ನಿಂತಿದೆ. ನಾವು ಸಂಗಮಯುಗೀ ಬ್ರಾಹ್ಮಣರು ಶಿಖೆಗೆ
ಸಮಾನರಾಗಿದ್ದೇವೆ. ಪ್ರಜಾಪಿತ ಬ್ರಹ್ಮಾನಿದ್ದಾರೆಂದ ಮೇಲೆ ಅವಶ್ಯವಾಗಿ ಬ್ರಾಹ್ಮಣರೂ ಇರಬೇಕು.
ನಿಮಗೂ ಸಹ ತಂದೆಯು ತಿಳಿಸಿದ್ದಾರೆ ಆದ್ದರಿಂದಲೇ ನಿಶ್ಚಯ ಮಾಡಿಕೊಂಡಿದ್ದೀರಿ ಬಾಕಿ ಮುಖ್ಯವಾದ ಮಾತು
ನೆನಪಿನ ಯಾತ್ರೆಯಾಗಿದೆ. ಇದರಲ್ಲಿ ವಿಘ್ನಗಳು ಬರುತ್ತವೆ. ತಮ್ಮ ಚಾರ್ಟನ್ನು ನೋಡಿಕೊಳ್ಳುತ್ತಾ ಇರಿ
- ನಾವು ಎಲ್ಲಿಯವರೆಗೆ ತಂದೆಯನ್ನು ನೆನಪು ಮಾಡುತ್ತೇವೆ, ಎಷ್ಟು ಖುಷಿಯ ನಶೆಯೇರಿರುತ್ತದೆ? ಈ
ಆಂತರಿಕ ಖುಷಿಯಿರಲಿ - ನಮಗೆ ಹೂದೋಟದ ಮಾಲೀಕ, ಪತಿತ-ಪಾವನ ತಂದೆಯ ಕೈ ಸಿಕ್ಕಿದೆ, ನಾವು ಶಿವ
ತಂದೆಯೊಂದಿಗೆ ಬ್ರಹ್ಮಾ ತಂದೆಯ ಮೂಲಕ ಹ್ಯಾಂಡ್ಶೇಕ್ ಮಾಡುತ್ತೇವೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ತಮ್ಮ ಮನೆ
ಮತ್ತು ರಾಜಧಾನಿಯನ್ನು ನೋಡಿ ಅಪಾರ ಖುಷಿಯಲ್ಲಿರಬೇಕಾಗಿದೆ. ಸದಾ ನೆನಪಿರಲಿ - ಈಗ ನಮ್ಮ ಯಾತ್ರೆಯು
ಪೂರ್ಣವಾಯಿತು, ನಾವು ನಮ್ಮ ಮನೆಗೆ ಹೋಗುತ್ತೇವೆ ನಂತರ ರಾಜಧಾನಿಯಲ್ಲಿ ಬರುತ್ತೇವೆ.
2. ನಾವು ಬ್ರಹ್ಮಾ
ತಂದೆಯ ಮೂಲಕ ಶಿವ ತಂದೆಯೊಂದಿಗೆ ಹ್ಯಾಂಡ್ ಶೇಕ್ ಮಾಡುತ್ತೇವೆ. ಆ ಮಾಲೀಕನು ನಮ್ಮನ್ನು ಪತಿತರಿಂದ
ಪಾವನರನ್ನಾಗಿ ಮಾಡುತ್ತಿದ್ದಾರೆ, ನಾವು ಈ ವಿದ್ಯೆಯಿಂದ ಸ್ವರ್ಗದ ಪಟ್ಟದ ರಾಣಿಯರಾಗುತ್ತೇವೆ - ಇದೇ
ಆಂತರಿಕ ಖುಷಿಯಲ್ಲಿರಬೇಕಾಗಿದೆ.
ವರದಾನ:
ಮೂರು ಪ್ರಕಾರದ
ವಿಜಯದ ಮೆಡಲ್ ಪ್ರಾಪ್ತಿ ಮಾಡಿಕೊಳ್ಳುವಂತಹ ಸದಾ ವಿಜಯಿ ಭವ.
ವಿಜಯ ಮಾಲೆಯಲ್ಲಿ ನಂಬರ್
ಪ್ರಾಪ್ತಿ ಮಾಡಿಕೊಳ್ಳಬೇಕಾದರೆ ಮೊದಲು ಸ್ವಯಂನ ಮೇಲೆ ವಿಜಯಿ, ನಂತರ ಸರ್ವರ ಮೇಲೆ ವಿಜಯಿ ಮತ್ತು
ನಂತರ ಪ್ರಕೃತಿಯ ಮೇಲೆ ವಿಜಯಿಯಾಗಿ. ಯಾವಾಗ ಈ ಮೂರೂ ಪ್ರಕಾರದ ವಿಜಯದ ಮೆಡಲ್ ಪ್ರಾಪ್ತಿಯಾಗುವುದು
ಆಗ ವಿಜಯ ಮಾಲೆಯ ಮಣಿಯಾಗಲು ಸಾಧ್ಯ. ಸ್ವಯಂ ನ ಮೇಲೆ ವಿಜಯಿಯಾಗುವುದು ಅರ್ಥಾತ್ ತಮ್ಮ ವ್ಯರ್ಥ ಭಾವ,
ಸ್ವಭಾವವನ್ನು ಶ್ರೇಷ್ಠ ಭಾವ, ಶುಭ ಭಾವನೆಯಿಂದ ಪರಿವರ್ತನೆ ಮಾಡಬೇಕು. ಯಾರು ಈ ರೀತಿ ಸ್ವಯಂನ ಮೇಲೆ
ವಿಜಯಿಯಾಗುತ್ತಾರೆ ಅವರೇ ಅನ್ಯರ ಮೇಲೂ ಸಹಾ ವಿಜಯವನ್ನು ಪ್ರಾಪ್ತಿ ಮಾಡಿಕೊಳ್ಳುತ್ತಾರೆ.
ಪ್ರಕೃತಿಯ ಮೇಲೆ ವಿಜಯ ಪ್ರಾಪ್ತಿಮಾಡಿಕೊಳ್ಳುವುದು ಅರ್ಥಾತ್ ವಾಯುಮಂಡಲ, ವೈಭ್ರೇಷನ್ ಮತ್ತು
ಸ್ಥೂಲ ಪ್ರಕೃತಿಯ ಸಮಸ್ಯೆಗಳ ಮೇಲೆ ವಿಜಯಿಯಾಗುವುದು.
ಸ್ಲೋಗನ್:
ಸ್ವಯಂನ
ಕರ್ಮೇಂದ್ರಿಯಗಳ ಮೇಲೆ ಸಂಪೂರ್ಣ ರಾಜ್ಯ ಮಾಡುವಂತಹವರೇ ಸತ್ಯ ರಾಜಯೋಗಿಗಳು.
ಅವ್ಯಕ್ತ ಸೂಚನೆ:-
ಸಹಜಯೋಗಿ ಆಗಬೇಕಂದರೆ ಪರಮಾತ್ಮನ ಪ್ರೀತಿಯ ಅನುಭವಿಯಾಗಿರಿ.
ನೀವು ಮಕ್ಕಳಿಗೆ ಜ್ಞಾನ
ಜೊತೆ-ಜೊತೆ ಸತ್ಯ ಆತ್ಮಿಕ ಪ್ರೀತಿಯು ಸಿಕ್ಕಿದೆ. ಆ ಆತ್ಮಿಕ ಪ್ರೀತಿಯೇ ಪ್ರಭುವಿನವರಾಗಿ ಮಾಡಿದೆ.
ಪ್ರತಿ ಮಗುವಿಗೆ ಡಬಲ್ ಪ್ರೀತಿ ಸಿಕ್ಕಿದೆ – ಒಂದು ತಂದೆಯದ್ದು, ಇನ್ನೊಂದು ದೈವೀ ಪರಿವಾರದ್ದು.
ಪ್ರೀತಿಯ ಅನುಭವ ಪ್ರೇಮಿಯನ್ನಾಗಿ ಮಾಡಿದೆ. ಪ್ರೀತಿಯೇ ಆಯಸ್ಕಾಂತದ ಕೆಲಸವನ್ನು ಮಾಡುತ್ತದೆ. ನಂತರ
ಕೇಳಲು ಮತ್ತು ಸಾಯಲು ಸಹ ಸಿದ್ಧರಾಗಿ ಬಿಡುತ್ತಾರೆ. ಸಂಗಮದಲ್ಲಿ ಯಾರು ಸತ್ಯ ಪ್ರೀತಿಯಲ್ಲಿ
ಬದುಕಿದ್ದಂತೆ ಸಾಯುತ್ತಾರೆ ಅವರೇ ಸ್ವರ್ಗದಲ್ಲಿ ಹೋಗುತ್ತಾರೆ.